ಸುಳ್ಯ: ಸುಳ್ಯ ನಗರದಲ್ಲಿ ವಿವಿಧ ಭಾಗಗಳಲ್ಲಿ ರಸ್ತೆ ಬದಿ ಒತ್ತುವರಿ ಮಾಡಿರುವುದನ್ನು ತೆರವು ಮಾಡಲು ಹಾಗೂ ರಸ್ತೆ ಬದಿ ಒತ್ತುವರಿ ಮಾಡಿದ ಸ್ಥಳದಲ್ಲಿ ಮಾಡಿದ ನಿರ್ಮಾಣಗಳನ್ನು ತೆರವು ಮಾಡಲು ನಗರ ಪಂಚಾಯತ್ ಸಭೆಯಲ್ಲಿ ನಿರ್ಧರಿಸಲಾಗಿದೆ. ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಜಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ನಗರದ ವಿವಿಧ
ರಸ್ತೆಗಳ ಬದಿಯನ್ನು ಒತ್ತುವರಿ ಮಾಡಿ ಕಟ್ಟಡ, ಕಂಪೌಂಡ್ ಮತ್ತಿತರ ನಿರ್ಮಾಣ ಮಾಡಿರುವುದರಿಂದ ರಸ್ತೆ ಅಗಲೀಕರಣ, ಚರಂಡಿ ಮತ್ತಿತರ ನಿರ್ಮಾಣಕ್ಕೆ ಸಮಸ್ಯೆ ಆಗುತಿದೆ. ಆದುದರಿಂದ ಈ ರೀತಿಯ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ಒತ್ತುವರಿ ಆಗಿರುವ ಬಗ್ಗೆ ಮಾಹಿತಿ ನೀಡಿ. ಅವರಿಗೆ ನೋಟಿಸ್ ನೀಡಿ ಬಳಿಕ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಸಭೆಗೆ ತಿಳಿಸಿದರು.
ಚರಂಡಿ ದುರಸ್ತಿ, ಅಪಾಯಕಾರಿ ಮರಗಳ ತೆರವು ಕಾರ್ಯ ನಡೆಯದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಚರಂಡಿ ದುರಸ್ತಿ, ಅಪಾಯಕಾರಿ ಮರಗಳ ತೆರವು ಕಾರ್ಯ ನಡೆಯುತಿದೆ. ಆದಷ್ಟು ಬೇಗ ಪೂರ್ತಿ ಮಾಡುವುದಾಗಿ ಮುಖ್ಯಾಧಿಕಾರಿ ಸುಧಾಕರ್ ಸಭೆಗೆ ತಿಳಿಸಿದರು. ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಣಕ್ಕೆ ಶಾಲಾ ಸಮಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ನಗರದ ವಿವಿಧ ಕಡೆಗಳಲ್ಲಿ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ತಹಶೀಲ್ದಾರ್ ಪೊಲೀಸ್ ಇಲಾಖೆಗೆ ಸೂಚಿಸಿದರು. ವಾಹನ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಇದ್ದಲ್ಲಿ ಮಾತ್ರ ಬಾರಿಕೇಡ್ ಅಳವಡಿಸಿ ಎಂದು ಸೂಚಿಸಿದರು. ರಥಬೀದಿಯಲ್ಲಿ ರೋಟರಿ ಶಾಲೆ ಸಮೀಪ ಬಸ್ ನಿಲ್ದಾಣದ ಬಳಿಯಲ್ಲಿ ಬಸ್ ನಿಲ್ಲಿಸದೆ ಅಂಗಡಿಯ ಎದುರಿನಲ್ಲಿ ಬಸ್, ವಾಹನ ನಿಲ್ಲಿಸುವ ಕಾರಣ ವಾಹನ ದಟ್ಟಣೆ ಉಂಟಾಗುತಿದೆ, ಆಲೆಟ್ಟಿ ಕ್ರಾಸ್ನಲ್ಲಿ, ಸರಕಾರಿ ಆಸ್ಪತ್ರೆಯ ಬಳಿ ವಾಹನ ದಟ್ಟಣೆ ಉಂಟಾಗುತಿದೆ ಎಂದು ಸದಸ್ಯರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಶರೀಫ್ ಕಂಠಿ ಸಭೆಯ ಗಮನಕ್ಕೆ ತಂದರು. ಅಗತ್ಯ ಕ್ರಮ ತೆಗೆದುಕೊಳ್ಳಲು ತಹಶೀಲ್ದಾರ್ ಅವರು ಪೊಲೀಸರಿಗೆ ತಿಳಿಸಿದರು. ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲು, ಕಂಟ್ರೋಲ್ ರೂಂ ತೆರೆಯಲು ಸೂಚಿಸಲಾಯಿತು.
ಸುಳ್ಯ ಖಾಸಗೀ ಬಸ್ ನಿಲ್ದಾಣಕ್ಕೆ ಯಾವುದೇ ವಾಹನ ಪ್ರವೇಶ ಮಾಡಿದರೂ ಅವರಿಂದ ಪಾರ್ಕಿಂಗ್ ಶುಲ್ಕ ಪಡೆಯುತ್ತಿದ್ದಾರೆ. 5 ರೂವಿನ ಪತ್ರಿಕೆಗೆ ಬಂದವರೂ 10 ರೂ ಪಾರ್ಕಿಂಗ್ ಫೀಸ್ ನೀಡಬೇಕಾದ ಸ್ಥಿತಿ ಇದೆ ಎಂದು ಸದಸ್ಯರಾದ ಕೆ.ಎಸ್.ಉಮ್ಮರ್ ಹೇಳಿದರು. ನಾವೂರು, ಬೋರುಗುಡ್ಡೆ ವಾರ್ಡ್ನಲ್ಲಿ ರಸ್ತೆಗೆ ಆಡು ಮತ್ತಿತರ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ ಆಗ್ರಹಿಸಿದರು.
ನಗರ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.