ಸುಳ್ಯ:ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಎದುರಾಗುವ ಮಳೆ ಹಾನಿ ಮತ್ತು ಪ್ರಾಕೃತಿಕ ವಿಕೋಪ ತಡೆಗೆ ಎಲ್ಲಾ ಸಿದ್ಧತೆಗಳನ್ನೂ ಕೈಗೊಳ್ಳಲು ಸುಳ್ಯ ನಗರ
ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆಯಲ್ಲಿ ನಿರ್ದೇಶನ ನೀಡಲಾಯಿತು. ನಗರ ಪಂಚಾಯತ್ ಆಡಳಿತಾಧಿಕಾರಿ ತಹಶಿಲ್ದಾರ್ ಜಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಪಂಚಾಯತ್
ಸದಸ್ಯರು, ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಗುಡ್ಡ, ಬರೆ ಜರಿಯಲು ಸಾಧ್ಯತೆ ಇರುವ ಅಪಾಯಕಾರಿ ಸ್ಥಳಗಳು, ನದಿ ನೀರು ನುಗ್ಗುವ ಸ್ಥಳಗಳ ಬಗ್ಗೆ ಪಟ್ಟಿ ತಯಾರಿಸಿ ಅಲ್ಲಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಶಿಲ್ದಾರ್ ಸೂಚಿಸಿದರು. ಅತೀ ಅಪಾಯಕಾರಿ ಮರಗಳನ್ನು ತೆರವು ಮಾಡಲು,ರೆಂಬೆ,ಕೊಂಬೆ ತೆರವಿಗೆ ಸೂಚಿಸಲಾಯಿತು. ನಗರದ ಚರಂಡಿ ವ್ಯವಸ್ಥೆ ಸರಿ ಪಡಿಸಲು ಟೆಂಡರ್ ಕರೆಯಲಾಗಿದೆ ಎಂದು ನಗರ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಸಭೆಗೆ ತಿಳಿಸಿದರು.24 ಗಂಟೆ ಕಾರ್ಯಾಚರಿಸುವ ಕಂಟ್ರೋಲ್ ರೂಂ ತೆರೆಯಬೇಕು. ಕಂಟ್ರೋಲ್ ರೂಂಗೆ ಬಂದಿರುವ ಕರೆಗಳನ್ನು ದಾಖಲಿಸಿ ಅದಕ್ಕೆ ಸೂಕ್ತ ಪರಿಹಾರ ಒದಗಿಸಲು ಸೂಚಿಸಲಾಯಿತು. ಜೆಸಿಬಿ ಮತ್ತಿತರ ಅಗತ್ಯ ಪರಿಕರಗಳನ್ನು ಸಿದ್ಧಪಡಿಸಿಡಲು ಸೂಚಿಸಿದರು.
ಮೆಸ್ಕಾಂಗೆ ನೋಟೀಸ್ ನೀಡಲು ಸೂಚನೆ:
ಸುಳ್ಯ ನಗರದ ದುಗ್ಗಲಡ್ಕ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ವಿದ್ಯುತ್ ಸಮಸ್ಯೆಗೆ ಪರಿಹಾರ ಆಗುತ್ತಿಲ್ಲ ಎಂದು ಸದಸ್ಯರು ದೂರಿದರು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತು ಉತ್ತರಿಸಲು ಮೆಸ್ಕಾಂ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಮೆಸ್ಕಾಂಗೆ ಶೋಕಾಸ್ ನೋಟಿಸ್ ನೀಡಲು ತಹಶೀಲ್ದಾರ್ ಮಂಜುನಾಥ್ ಅವರು ಸೂಚಿಸಿದರು.
ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ಸದಸ್ಯರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಕೆ.ಎಸ್.ಉಮ್ಮರ್, ಬಾಲಕೃಷ್ಣ ಭಟ್, ಬಾಲಕೃಷ್ಣ ರೈ, ಬುದ್ಧ ನಾಯ್ಕ್, ಶರೀಫ್ ಕಂಠಿ, ಸುಧಾಕರ ಕೆ, ಡೇವಿಡ್ ಧೀರಾ ಕ್ರಾಸ್ತಾ, ಸರೋಜಿನಿ ಪೆಲ್ತಡ್ಕ, ನಾರಾಯಣ ಶಾಂತಿನಗರ, ಶೀಲಾ ಅರುಣ ಕುರುಂಜಿ, ಶಶಿಕಲಾ ನೀರಬಿದಿರೆ, ಪೂಜಿತಾ, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಸುಶೀಲಾ ಜಿನ್ನಪ್ಪ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ವಿನೋದ್ ಲಸ್ರಾದೋ, ಶಾರಿಖ್ ಡಿ.ಎಂ ಮತ್ತಿತರರು ಉಪಸ್ಥಿತರಿದ್ದರು.