ಸುಳ್ಯ:ಸುಳ್ಯ ನಗರ ಪಂಚಾಯತ್ ಮುಂಭಾಗದ ಶೆಡ್ನಲ್ಲಿ ತುಂಬಿಡಲಾಗಿರುವ ಕಸವನ್ನು ತೆರವು ಮಾಡುವ ವಿಚಾರದಲ್ಲಿ ಆಡಳಿತ ಪಕ್ಷದ ಸದಸ್ಯರ ಮಧ್ಯೆ ಒಡಕು, ಅಸಮಾಧಾನ ಸ್ಫೋಟಗೊಂಡ ಘಟನೆ ನಡೆದಿದೆ.ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮತ್ತು ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಧ್ಯೆ ವಾಕ್ಸಮರ ತಾರಕಕ್ಕೆ ಏರಿ ನಗರ ಪಂಚಾಯತ್ ಸಭೆಯಲ್ಲಿ ಗದ್ದಲಮಯ ವಾತಾವರಣ ಉಂಟಾದ ಘಟನೆ ಬುಧವಾರ ನಡೆದ ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ವಿಷಯ ಪ್ರಸ್ತಾಪಿಸಿದ ವಿನಯಕುಮಾರ್ ಕಂದಡ್ಕ ನಗರ ಪಂಚಾಯತ್ ಮುಂಭಾಗದಲ್ಲಿ ತುಂಬಿರುವ ಕಸವನ್ನು ಸಾಗಾಟ ಮಾಡುವ ವಿಚಾರದಲ್ಲಿ ಸಭೆಯಲ್ಲಿ ನಿರ್ಣಯ ಮಾಡದೆ, ಟೆಂಡರ್ ಕರೆಯದೆ ನಡೆಸುತ್ತಿದ್ದು ನಿಯಮ ಪಾಲನೆ ಮಾಡದೆ ಕಸ ಸಾಗಾಟ ಮಾಡುವುದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ ನೀರಬಿದಿರೆ ಹಾಗಾದರೆ ಕಸ ಸಾಗಾಟ ಮಾಡುವುದು ಬೇಡವೇ, ನಿಮ್ಮ ಅವಧಿಯಲ್ಲಿಯೂ ಲಕ್ಷಾಂತರ ರೂ ಖರ್ಚು ಮಾಡಿ ಕಸ ಸಾಗಾಟ ಮಾಡಿದ್ದೀರಿ ಎಂದರು. ಇದಕ್ಕೆ ಉತ್ತರಿಸಿದ ವಿನಯಕುಮಾರ್ ಕಂದಡ್ಕ ನಮ್ಮ ಅವಧಿಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ನಿರ್ಣಯ ಮಾಡಿ ಕಾನೂನು ಪ್ರಕಾರ ಕಸವನ್ನು ಸಾಗಾಟ ಮಾಡಲಾಗಿತ್ತು. ಆದರೆ ಈಗ ಯಾವುದೇ ನಿರ್ಣಯ ಮಾಡದೆ ಕಸ ಸಾಗಾಟ ಮಾಡುವುದು ಸರಿಯಲ್ಲ ಎಂದರು. ಇದಕ್ಕೆ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಮತ್ತಿತರರು ಧ್ವನಿಗೂಡಿಸಿ ಸದಸ್ಯರ ಗಮನಕ್ಕೆ ತಾರದೆ ಕಸ ಸಾಗಾಟ ಮಾಡಿದ್ದು ಸರಿಯಲ್ಲ ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಶಶಿಕಲಾ ಈಗ ಕಸ ವಿಲೇವಾರಿ ಮಾಡುವ ಖಾಸಗೀ ಕಂಪೆನಿಯ ಮೂಲಕವೇ ಉಳಿದ ಕಸವನ್ನು ಸಾಗಾಟ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಹಾಲಿ ಮತ್ತು ಮಾಜಿ ಅಧ್ಯಕ್ಷರ ಮಧ್ಯೆ ಬಿರುಸಿನ ಚರ್ಚೆ, ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ನಗರ ಪಂಚಾಯತ್ ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ ಈ ಹಿಂದೆ ಕಸ ಉರಿಸಲು ಕರಾರು ಮಾಡಿದ ಖಾಸಗೀ ಕಂಪೆನಿಯು ಉರಿಸದೆ ತುಂಬಿಡಲಾದ ಕಸವನನ್ನು ಅವರ ಮುಖಾಂತರವೇ ಈಗ ಸಾಗಾಟ ಮಾಡಲು ವ್ಯವಸ್ಥೆ ಮಾಡಿದೆ, ಹಿಂದೆ 2021ರಿಂದ 25ರ ತನಕ ಕಸ ಸಾಗಾಟ ಸಂಬಂಧಿಸಿ ಮಾಡಿದ ನಿರ್ಣಯಗಳನ್ನು, ತೆಗೆದುಕೊಂಡ ನಿರ್ಧಾರಗಳನ್ನು ಸಭೆಗೆ ತಿಳಿಸಿದ ಅವರು ಕಸ ವಿಲೇವಾರಿಗೆ ಈ ಹಿಂದೆ ಖಾಸಗೀ ಕಂಪೆನಿಯ ಜೊತೆ ಒಪ್ಪಂದ ಆಗಿತ್ತು. ಅದೇ ಈಗಲೂ ಮುಂದುವರಿದಿದೆ. ಅದರಲ್ಲಿ ಬದಲಾವಣೆ ಆಗಿಲ್ಲ ಎಂದರು. ಆಡಳಿತ ಪಕ್ಷದವರ ಮಧ್ಯೆ ಕಸ ವಿಲೇವಾರಿ ವಿಷಯದ ಚರ್ಚೆ, ಆರೋಪ ಉಂಟಾಗಿರುವ ಹಿನ್ನಲೆಯಲ್ಲಿ ಈ ಕುರಿತು ತನಿಖೆ ನಡೆಸಬೇಕು ಎಂದು ವಿಪಕ್ಷ ಸದಸ್ಯರಾದ ಎಂ.ವೆಂಕಪ್ಪ ಗೌಡ, ಶರೀಪ್ ಕಂಠಿ, ಸಿದ್ದಿಕ್ ಕೊಕ್ಕೊ, ಧೀರಾ ಕ್ರಾಸ್ತಾ, ರಿಯಾಝ್ ಕಟ್ಟೆಕ್ಕಾರ್ ಒತ್ತಾಯಿಸಿದರು. ಕಸ ವಿಲೇವಾರಿ ಕುರಿತು ಲೋಕಾಯುಕ್ತ ತನಿಖೆ ನಡೆಸಲು ನಿರ್ಣಯ ಮಾಡಿ,ಲೋಕಾಯುಕ್ತ ಅಥವಾ ಜಿಲ್ಲಾಧಿಕಾರಿ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು.
ಕಸ ವಿಲೇವಾರಿ ನಡೆಸಲು ಸಹಕಾರ ನೀಡಿದ ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಅವರನ್ನು ವಿನಯಕುಮಾರ್ ಕಂದಡ್ಕ ಶಾಲು ಹಾಕಿ ಸನ್ಮಾನಿಸಿದ ಘಟನೆಯೂ ನಡೆಯಿತು.
ಸುಳ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಸಭೆ ಕರೆಯಲು ಹಿಂದಿನ ಸಭೆಯಲ್ಲಿ ನಿರ್ಧರಿಸಿದ್ದರೂ ನಡೆಯದ ಬಗ್ಗೆ ಎಂ.ವೆಂಕಪ್ಪ ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಸಿಸಿ ಟಿವಿ ನಿರ್ವಹಣೆ ಇಲ್ಲದ ಬಗ್ಗೆ ನಗರದಲ್ಲಿ ಪೈಪ್ ಲೈನ್ ಅಳವಡಿಕೆಗೆ ಅಗೆದು ಹಾಕಿದ ರಸ್ತೆ ಸರಿ ಪಡಿಸದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ, ಚರಂಡಿ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಎಲ್ಲಾ ಜನಪ್ರತಿನಿಧಿಗಳೂ ಪ್ರಯತ್ನ ನಡೆಸಬೇಕು ಸದಸ್ಯರು ಒತ್ತಾಯಿಸಿದರು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಬಸವರಾಜ್ ಹಾಗೂ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.





