ಸುಳ್ಯ:ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿದರೆ ಹಾಗೂ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಧ್ಯೆ ಬಿರುಸಿನ ಚರ್ಚೆ, ಮಾತಿನ ಚಕಮಕಿ ನಡೆದ ಘಟನೆಗೆ ನಗರ ಪಂಚಾಯತ್ ಸಾಮಾನ್ಯ ಸಭೆ ವೇದಿಕೆಯಾಯಿತು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಅವರ ವಿರುದ್ಧ ನೀರು ಸರಬರಾಜು ಸಿಬ್ಬಂದಿ ದೂರು ನೀಡಿದ್ದಾರೆ ಎಂಬ
ಘಟನೆಗೆ ಸಂಬಂಧಿಸಿ ಸಿಬ್ಬಂದಿ ಕ್ಷಮೆ ಕೇಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಆಗ್ರಹಿಸಿದರು. ಇದು ಇತ್ಯರ್ಥ ಆಗದೆ ಸಭೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಕಿಶೋರಿ ಶೇಟ್ ಹೇಳಿದರು. ವಿಷಯ ಕಳೆದ ಸಭೆಯಲ್ಲಿ ಪ್ರಸ್ತಾಪ ಆದ ಸಂದರ್ಭದಲ್ಲಿ ಅದನ್ನು ಮುಗಿಸುವುದಾಗಿ ಅಧ್ಯಕ್ಷರು ಹೇಳಿದ್ದರೂ ಅದನ್ನು ಮುಗಿಸಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಇದನ್ನು ಮುಗಿಸಲು ಮಾತುಕತೆಗೆ ಕರೆದರೂ ಸ್ಥಾಯಿ ಸಮಿತಿ ಅಧ್ಯಕರು ಬರಲಿಲ್ಲ, ನಮಗೆ ಮತ್ತೇನು ಮಾಡಲಾಗುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಎಲ್ಲರನ್ನು ಸರಿಪಡಿಸಿಕೊಂಡು ಹೋಗಬೇಕಾದ ಅಧ್ಯಕ್ಷರು ಹಾಗೆ ಮಾಡುತ್ತಿಲ್ಲ ಸಮಸ್ಯೆಗಳನ್ನು ಸರಿಪಡಿಸುತ್ತಿಲ್ಲ, ಎಲ್ಲರನ್ನು

ವಿಶ್ವಾಸಕ್ಜೆ ತೆಗೆದುಕೊಳ್ಳದೆ ಕೆಲವರು ಹೇಳಿದಂತೆ ಆಡಳಿತ ನಡೆಸುತ್ತಿದ್ದಾರೆ ಎಂದರು, ಇದಕ್ಕೆ ಉತ್ತರಿಸಿದ ಶಶಿಕಲಾ ನೀವು ಅಧ್ಯಕ್ಷರಾಗಿ ನೀವು ಮಾಡಿದ ಕೆಲಸ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಶಶಿಕಲಾ ಹಾಗೂ ಮಾಜಿ ಅಧ್ಯಕ್ಷೆ ವಿನಯಕುಮಾರ್ ಮಧ್ಯೆ ಕೆಲ ಹೊತ್ತು ವಾಗ್ವಾದ ಮಾತಿನ ಚಕಮಕಿ ನಡೆಯಿತು. ನ.ಪಂ.ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಮಧ್ಯೆಯೂ ವಾಗ್ವಾದ ನಡೆಯಿತು.
ಈ ಸಂದರ್ಭದಲ್ಲಿ ಈ ಘಟನೆಯಲ್ಲಿ ಏನೋ ಷಡ್ಯಂತ್ರ ಇದೆ ಎಂದು ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡ ಆಕ್ಷೇಪಿಸಿದರು.ನಿಮ್ಮ ಪಕ್ಷದ ಹೆಡ್ ಆಫೀಸಿನಲ್ಲಿ ಮುಗಿಸಬೇಕಾದ ವಿಷಯ ಇಲ್ಲಿ ಮಾತನಾಡುತ್ತೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.ನಗರ ಪಂಚಾಯತ್ ಸಭೆಯಲ್ಲಿ ಪಕ್ಷದ ವಿಚಾರ ತರುವುದು ಬೇಡ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದರು.
ಬಳಿಕ ಸಿಬ್ಬಂದಿಯನ್ನು ಸಭೆಗೆ ಕರೆದು ವಿವರಣೆ ಕೇಳಿ ಮಾತುಕತೆ ನಡೆಸಿ ಇತ್ಯರ್ಥಗೊಳಿಸಲಾಯಿತು.












