ಸುಳ್ಯ:ಸುಳ್ಯದ ವಿದ್ಯುತ್ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ.ಹಲವು ದಶಕಗಳಿಂದ ಜನರು ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆ ಪರಿಹಾರ ಆಗದ ಬಗ್ಗೆ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಸುಳ್ಯದಲ್ಲಿ ಅನುಷ್ಠಾನವಾಗುತ್ತಿರುವ 110 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ ವಿಳಂಬವಾಗಿರುವುದಕ್ಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸುಳ್ಯದ 110 ಕೆ.ವಿ. ವಿದ್ಯುತ್ ಕಾಮಗಾರಿ ಪೂರ್ತಿ ಆಗದಿರುವ ಬಗ್ಗೆ
ಸದಸ್ಯರು ಪ್ರಶ್ನಿಸಿದಾಗ ಈ ಕುರಿತು ಚರ್ಚೆ ನಡೆದು ಶಾಸಕರು ಹಾಗೂ ಮೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳಿದ್ದು ಸಭೆ ನಡೆಸುವ ಕುರಿತು ಅಧ್ಯಕ್ಷರು ಭರವಸೆ ನೀಡಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡ ನನ್ನ ವಾರ್ಡ್ನಲ್ಲಿ ಭಾನುವಾರದ ಗಾಳಿ ಮಳೆಯ ನಂತರ ಹೋದ ಕರೆಂಟು ಇನ್ನೂ ಬಂದಿಲ್ಲ. ವಾರ್ಡ್ನವರು ನನ್ನನ್ನು ಪ್ರಶ್ನಿಸುತ್ತಾರೆ. ಸುಳ್ಯದ ವಿದ್ಯುತ್ ಸಮಸ್ಯೆಗೆ ಪರಿಹಾರ ಏನು. 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಯಾಕೆ ಹೀಗೆ ವಿಳಂಬವಾಗುತಿದೆ, ಸಮಸ್ಯೆ ಏನಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಸಂಬಧಿಸಿದ ಅಧಿಕಾರಿಗಳನ್ನು ಬರಲು ಮಾಡಿ ಎಂದು ಒತ್ತಾಯಿಸಿದರು. ಅಧಿಕಾರಿಗಳನ್ನು ಬರಲು ಹೇಳುತ್ತೇವೆ. ಮತ್ತು ಈ ಕುರಿತು ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಸುವ ಎಂದು ಅಧ್ಯಕ್ಷರು ಉತ್ತರಿಸಿದರು.
110 ಕೆ.ವಿ.ಸಬ್ ಸ್ಟೇಷನ್ ಸಮಸ್ಯೆಯ ಬಗ್ಗೆ ಶಾಸಕರು, ಸಂಸದರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಎಂದು ವೆಂಕಪ್ಪ ಗೌಡ ಆಗ್ರಹಿಸಿದರು. ಆಗ ಅಧ್ಯಕ್ಷೆ ಶಶಿಕಲಾ ಮಾತನಾಡಿ ಈ ಕುರಿತು ಈಗಾಗಲೇ ಶಾಸಕರ ಜತೆ ಮಾತನಾಡಿದ್ದು, ಅವರು ಸಭೆಗೆ ಬರುವುದಾಗಿ ಒಪ್ಪಿದ್ದಾರೆ. ಮುಂದಿನ ಸಭೆಗೆ ಅವರನ್ನು ಬರುವಂತೆ ಕೇಳುತ್ತೇವೆ. ಸಬಂಧಿಸಿದ ಅಧಿಕಾರಿಗಳನ್ನು ಕರೆಯುತ್ತೇವೆ ಎಂದು ಭರವಸೆ ನೀಡಿದರು. ವಿದ್ಯುತ್ ಸಮಸ್ಯೆಯ ಕುರಿತು ಸದಸ್ಯರು ಪಕ್ಷ ಭೇದ ಮರೆತು ಧ್ವನಿ ಎತ್ತಿದರು.

ಅಮೃತ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಪೈಪ್ ಅಳವಡಿಸಲು ರಸ್ತೆ ಕಡಿದು ಹಾಕಿರುವುದು, ಕಾಂಕ್ರೀಟ್, ಇಂಟರ್ಲಾಕ್ ತೆಗೆದಿರುವುದನ್ನು ಕೂಡಲೇ ಪೂರ್ವ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಚರಂಡಿ ರಿಪೇರಿ, ಕಾಡು ಕಡಿಯುವುದು ಮತ್ತಿತರ ಮಳೆಗಾಲಕ್ಕೆ ಸಿದ್ಧತೆಗಾಗಿ ವಾರ್ಡ್ಗಳಿಗೆ ಇರಿಸಿದ ಅನುದಾನ ಹೆಚ್ಚಿಸಬೇಕು. ಕೂಡಲೇ ಟೆಂಡರ್ ಕರೆದು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ್, ಪಂಚಾಯತ್ ಸದಸ್ಯರುಗಳಾದ ಸರೋಜಿನಿ ಪೆಲ್ತಡ್ಕ, ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಬಾಲಕೃಷ್ಣ ಭಟ್ ಕೊಡೆಂಕಿರಿ, ಉಮ್ಮರ್ ಕೆ.ಎಸ್. ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಬಾಲಕೃಷ್ಣ ರೈ ದುಗಲಡ್ಕ, ನಾರಾಯಣ ಶಾಂತಿನಗರ, ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ಸುಶೀಲ ಜಿನ್ನಪ್ಪ, ಶೀಲಾ ಕುರುಂಜಿ, ಸರೋಜಿನಿ ಪೆಲ್ತಡ್ಕ, ನಾಮನಿರ್ದೇಶಿತ ಸದಸ್ಯರುಗಳಾದ , ರಾಜು ಪಂಡಿತ್, ಭಾಸ್ಕರ ಪೂಜಾರಿ ದುಗಲಡ್ಕ ಸಭೆಯಲ್ಲಿ ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.