ಸುಳ್ಯ: ನಗರ ಪಂಚಾಯಿತಿಯಲ್ಲಿ ಪ್ರಮುಖ ಅಧಿಕಾರಿಗಳಿಲ್ಲದೇ ಹಲವು ತಿಂಗಳುಗಳಾಗಿದೆ. ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ನಗರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸಚಿವರ ಊರಿನಲ್ಲಿ ಪ್ರಮುಖ ಅಧಿಕಾರಿಗಳೆ ಇಲ್ಲದಿದ್ದರೆ ಹೇಗೆ?. ನಗರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಸಚಿವರು ಇಚ್ಚಾಶಕ್ತಿ ತೋರಿಸುತ್ತಿಲ್ಲ ಎಂದು ನ.ಪಂ. ವಿಪಕ್ಷ ಸದಸ್ಯರು ಅರೋಪಿಸಿದ ಘಟನೆ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ
ಮಾತನಾಡಿದ ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ನಗರ ಕಳೆದ ಹಲವು ತಿಂಗಳಿನಿಂದ ನ.ಪಂ.ನಲ್ಲಿ ಇಂಜಿನಿಯರ್, ಆರೋಗ್ಯ ನಿರೀಕ್ಷಕ, ಕಂದಾಯ ನಿರೀಕ್ಷಕರಿಲ್ಲದೇ ಅಭಿವೃದ್ದಿ ಕೆಲಸಗಳು ಬಾಕಿ ಉಳಿದಿದೆ. 5 ಸಾಮಾನ್ಯ ಸಭೆಗಳು ಅಧಿಕಾರಿಗಳು ಇಲ್ಲದೇ ನಡೆದಿದೆ. ಕ್ರೀಯಾಯೋಜನೆ ಆಗಿ 6 ತಿಂಗಳಾದರೂ ವಾರ್ಡುಗಳಿಗೆ ಅನುದಾನ ಹಂಚಿಕೆ ಆಗಿಲ್ಲ. ಜನರಿಗೆ ಭರವಸೆ ಕೊಡುವ ಕೆಲಸ ಮಾತ್ರ ಆಗುತ್ತಿದೆ ಎಂದು ಹೇಳಿದರು.ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ನಮ್ಮ ಶಾಸಕರು ಸಚಿವರಾದ ಬಳಿಕ ಅನುದಾನ ತರಲು ಹಿಂದೇಟು ಹಾಕುವ ಕಾರಣ ಸಭೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಗರ ಪಂಚಾಯಿತಿಯಲ್ಲಿ ಹಿರಿಯ ಸದಸ್ಯರ ಸಲಹೆಗಳಿಗೆ ಬೆಲೆ ಇಲ್ಲ. ನಗರದ ಜನರ ಅಭಿವೃದ್ದಿಗೆ ಅನುದಾನ ತನ್ನಿ. ಸಚಿವರಿಗೆ ಇಚ್ಚಾಶಕ್ತಿ ಇಲ್ಲದ ಕಾರಣ ಈ ರೀತಿ ಆಗಿದೆ ಎಂದು ಎಂದು ಹೇಳಿದರು. ಸಭೆಗೆ ಸಚಿವರು ಬರಬೇಕು ಎಂದು ಕಳೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಕಪ್ಪುಪಟ್ಟಿ ಹಾಕಿ ಸಭೆಯಲ್ಲಿ ಕುಳಿತಿದ್ದರು. ಅಲ್ಲದೇ ಸಚಿವರು ಸಭೆಗೆ ಬರುವವರೆಗೆ ಕಪ್ಪು ಪಟ್ಟಿ ಹಾಕಿ ಸಭೆಯಲ್ಲಿ ಇರುತ್ತೇವೆ ಎಂದಿದ್ದರು. ಈ ಸಭೆಗೆ ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಕಪ್ಪು ಪಟ್ಟಿ ಮತ್ತು ಹೂವಿನ ಗೊಂಚಲನ್ನು ತಂದು. ಸಚಿವರು ಬಂದರೆ ಹೂ ನೀಡಿ ಸ್ವಾಗತಿಸುತ್ತೇನೆ. ಇಲ್ಲದಿದ್ದರೆ ಕಪ್ಪು ಪಟ್ಟಿ ಹಾಕಿ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. ಬಳಿಕ ವಿಪಕ್ಷದ ಎಲ್ಲಾ ಸದಸ್ಯರು ಕಪ್ಪು ಪಟ್ಟಿ ಧರಿಸಿ ಸಭೆಯಲ್ಲಿ ಭಾಗವಹಿಸಿದರು.
ಬಳಿಕ ಉತ್ತರಿಸಿದ ಅಧ್ಯಕ್ಷರು ಸಚಿವರಾದ ಅಂಗಾರ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಅವರಲ್ಲಿ ಈಗಾಗಲೇ ಮಾತನಾಡಲಾಗಿದೆ. ಕೂಡಲೇ ಸುಳ್ಯ ನಗರದ ಸಮಸ್ಯೆಗಳನ್ನು ಚರ್ಚಿಸಲು ವಿಶೇಷ ಸಭೆ ಕರೆಯಲಾಗುವುದು ಎಂದು ಹೇಳಿದರು. ಶಾಸಕರನ್ನು ವಿಶೇಷ ಸಭೆಗಳಿಗೆ ಕರೆಯುವುದಲ್ಲ.ಸಾಮಾನ್ಯ ಸಭೆಗೆ ಕರೆಯಬೇಕು ಎಂದು ಕೆ.ಎಸ್.ಉಮ್ಮರ್ ಹೇಳಿದರು. ಕಳೆದ 8 ವರ್ಷಗಳಿಂದ ನಿವೇಶನ ರಹಿತರಿಗೆ ಭೂಮಿ ನೀಡಲು ಆಗಿಲ್ಲ. 1500 ಜನರ ಅರ್ಜಿಗಳು ನಗರ ಪಂಚಾಯಿತಿಯಲ್ಲಿ ಬಾಕಿ ಉಳಿದಿದೆ ಎಂದು ಕೆ.ಎಸ್.ಉಮ್ಮರ್ ಹೇಳಿದರು. ಇದಕ್ಕೆ ಉತ್ತರಿಸಿದ ವಿನಯ ಕುಮಾರ್ ನಗರದಲ್ಲಿ 452 ನಿವೇಶನಗಳಿಗೆ ಅರ್ಜಿಗಳು ಇದೆ. ನಗರದಲ್ಲಿ ನಿವೇಶನಗಳಿಗೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಕೆಲವು ಕಡೆ ಅರಣ್ಯ ಇಲಾಖೆಯ ಅಡೆತಡೆಗಳಿವೆ. ಮೊದಲು ವಾರ್ಡುಗಳಲ್ಲಿ ನಿವೇಶನ ರಹಿತರ ಪಟ್ಟಿ ಮಾಡಲಾಗುವುದು ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಂ.ವೆಂಕಪ್ಪ ಗೌಡ ಮೊದಲು ಜಾಗ ಗುರುತು ಮಾಡಿ ಬಳಿಕ ನಿವೇಶನ ರಹಿತರ ಪಟ್ಟಿ ತಯಾರಿಸುವುದು ಸೂಕ್ತ ಎಂದು ಹೇಳಿದರು.
ಸಭೆಯಲ್ಲಿ ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಅರುಣಾ ಕುರುಂಜಿ, ಕಳೆದ ಸಾಮಾನ್ಯ ಸಭೆಯಲ್ಲಿ ಸುಧಾಕರ್. ಎಂ.ಎಚ್, ನ.ಪಂ.ಸದಸ್ಯರು, ಅದಿಕಾರಿಗಳು ಇದ್ದರು.