ಸುಳ್ಯ: ಸುಳ್ಯ ನಗರ ಪಂಚಾಯತ್ನ 2023-24ನೇ ಸಾಲಿನ ಬಜೆಟನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಂಡಿಸಿದರು. ಬಳಿಕ ಬಜೆಟ್ ಮೇಲಿನ ಚರ್ಚೆ ನಡೆಯಿತು. 2023-24ನೇ ಸಾಲಿನಲ್ಲಿ ಸುಳ್ಯ ನಗರ ಪಂಚಾಯಿತಿ ಬಜೆಟ್ ಸುಳ್ಯ ನಗರದ ಸಮಗ್ರ ಅಭಿವೃದ್ದಿಯನ್ನು ಇಟ್ಟುಕೊಂಡು ಮಂಡಿಸಲಾದ ಬಜೆಟ್ ಎಂದು ಆಡಳಿತ ಪಕ್ಷ ಹೇಳಿಕೊಂಡರೆ. ಅಭಿವೃದ್ದಿಗೆ ಸಣ್ಣ ಪ್ರಮಾಣದ ಅನುದಾನ ಇರಿಸಿದ್ದಾರೆ. ಈ ಅನುದಾನದಿಂದ ನಗರದ ಸಮಗ್ರ ಅಭಿವೃದ್ದಿ ಸಾಧ್ಯವಿಲ್ಲ,
ಜನರ ಕಣೋರೆಸುವ ತಂತ್ರ ಎಂದು ವಿಪಕ್ಷ ಜರೆದಿದೆ.
ಬಜೆಟ್ ಚರ್ಚೆಯಲ್ಲಿ ನ.ಪಂ. ವಿಪಕ್ಷ ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ಈ ಬಾರಿಯ ಬಜೆಟ್ನಲ್ಲಿ ಅಭಿವೃದ್ದಿಗೆ ಇರಿಸಿದ ಅನುದಾನದಲ್ಲಿ ಅಭಿವೃದ್ದಿ ಖಂಡಿತ ಸಾಧ್ಯವಿಲ್ಲ. ನಗರದ ರಸ್ತೆಗಳ ಅಭಿವೃದ್ದಿಗೆ 1.30 ಕೋಟಿ ಅನುದಾನ ಇರಿಸಲಾಗಿದೆ. ಈ ಅನುದಾನದಲ್ಲಿ ಒಬ್ಬ ಸದಸ್ಯನಿಗೆ ಎಷ್ಟು ಅನುದಾನ ಸಿಗಬಹುದು ಮತ್ತು ಅಭಿವೃದ್ದಿ ಹೇಗೆ ಮಾಡಬಹುದು ಎಂದು ಉಮ್ಮರ್ ಪ್ರಶ್ನಿಸಿದರು. ಇದರಿಂದ ನಗರದ ಅಭಿವೃದ್ಧಿ ಖಂಡಿತ ಸಾಧ್ಯವಿಲ್ಲ. ಅಧಿಕಾರಿಗಳು ನೀಡಿದ ಲೆಕ್ಕಾಚಾರವನ್ನು ಮಂಡಿಸಿದ್ದಾರೆ. ಇದೊಂದು ಜನರ ಕಣ್ಣೋರೆಸುವ ತಂತ್ರ. ಪ್ರತಿ ಸದಸ್ಯರ ವಾರ್ಡ್ಳಿಗೆ 25 ಲಕ್ಷ ರೂ ಅನುದಾನ ನೀಡಲೇಬೇಕು ಎಂದು ಆಗ್ರಹಿಸಿದರು.

ನ.ಪಂ. ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ ಸುಳ್ಯ ನಗರದಲ್ಲಿರುವ ಸಮಸ್ಯೆಗಳ ಮೇಲೆ ಈ ಬಜೆಟ್ ಬೆಳಕು ಚೆಲ್ಲಿಲ್ಲ. ವೆಂಟೆಡ್ ಡ್ಯಾಂ ಮತ್ತು ಘನತ್ಯಾಜ್ಯ ನಿರ್ವಹಣೆ ಅಭಿವೃದ್ದಿ ಆಗಿದೆ ಎಂದ ಅವರು ಈ ಬಜೆಟ್ನಲ್ಲಿ ನಗರದ ಸೂಡಾ ಯೋಜನೆಯ ಜಾರಿಯ ಬಗ್ಗೆ, ಬಡಾವಣೆ ನಿರ್ಮಾಣದ ಬಗ್ಗೆ ಸೇರಿಸಿಲ್ಲ. ಅಲ್ಲದೇ 2.87 ಕೋಟಿ ವೆಚ್ಚದ ಒಳಚರಂಡಿ ದುರಸ್ಥಿ ಬಗ್ಗೆ ಉಲ್ಲೇಖ ಮಾಡಿಲ್ಲ. ತ್ಯಾಜ್ಯ ನಿರ್ವಹಣೆಗೆ ಗ್ಯಾಸಿಫೀಕೇಶನ್ ಯಂತ್ರದಿಂದ ಬರುವ ಗ್ಯಾಸ್ ಮತ್ತು ವಿದ್ಯುತ್ನಿಂದ ಬರುವ ಆದಾಯವನ್ನು ಬಜೆಟ್ನಲ್ಲಿ ಉಲ್ಲೇಖ ಮಾಡಿಲ್ಲ ಎಂದ ಅವರು ಸಚಿವ ಎಸ್. ಅಂಗಾರ ಅತೀ ಕಡಿಮೆ ಅನುದಾನ ನೀಡಿದ್ದಾರೆ. ಸಂಸದರಿಂದಲೂ ಯಾವ ಅನುದಾನ ಬಂದಿಲ್ಲ. ಈ ಎಲ್ಲಾ ಅಂಶಗಳನ್ನು ಬಜೆಟ್ಗೆ ಪೂರಕವಾಗಿ ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ಬಜೆಟ್ ಮಂಡಿಸಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಈ ಬಜೆಟ್ನ್ನು ನಗರದ ಸಮಗ್ರ ಅಭಿವೃದ್ದಿ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಲಾಗಿದೆ. ವಿಪಕ್ಷ ಸದಸ್ಯರು ನೀಡಿದ ಸಲಹೆಗಳನ್ನು ಈ ಬಜೆಟ್ನಲ್ಲಿ ಸೇರಿಸಿಕೊಳ್ಳಲಾಗುವುದು. ಗ್ಯಾಸಿಫಿಕೇಶನ್ ಯಂತ್ರದಿಂದ ಬರುವ ಆದಾಯವನ್ನು ಅಂದಾಜಿಸಲಾಗುವುದು. ನಗರದಲ್ಲಿ ಬಡಾವಣೆಗಳ ನಿರ್ಮಾಣ ಮಾಡಿ ಯೋಜನೆಗಳ ಮನೆಗಳ ನಿರ್ಮಾಣಕ್ಕೆ ಜಾಗ ಗುರುತು ಪಡಿಸಲಾಗುವುದು ಮತ್ತು ಸೂಡಾ ನಿಯಮಗಳನ್ನು ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಸ್ಥಿತಿಗತಿಗೆ ಅನುಗುಣವಾಗಿ ನಿಯಮಗಳನ್ನು ಜಾರಿಗೊಳಿಸಬೇಕಾಗಿದೆ ಎಂದರು. ಒಳಚರಂಡಿ ದುರಸ್ಥಿಗೆ ಈಗಾಗಲೇ ಇಲಾಖೆಗೆ ವರದಿ ಹೋಗಿದೆ ಎಂದು ಅಧ್ಯಕ್ಷರು ಹೇಳಿದರು.
ಬಜೆಟ್ ಮಂಡನೆಗೂ ಮೊದಲು ನಗರದ ಹಲವು ವಾರ್ಡ್ಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ ಮಾತನಾಡಿ ಸಮಯಕ್ಕೆ ಸರಿಯಾಗಿ ವಾಟರ್ಮ್ಯಾನ್ಗಳು ನೀರು ಬಿಡುವುದಿಲ್ಲ. ಹಲವು ತಿಂಗಳಿನಿಂದ ನಮ್ಮ ವಾರ್ಡ್ಗಳಿಗೆ ನೀರು ಬರುತ್ತಿಲ್ಲ. ವಾಟರ್ ಮ್ಯಾನ್ಗಳನ್ನು ಬದಲಾವಣೆ ಮಾಡಬೇಕು ಎಂದರು.
ವಾಟರ್ ಮ್ಯಾನ್ಗಳು ಸರಿಯಾದ ರೀತಿ ನೀರು ಬಿಟ್ಟರೆ ಸಮಸ್ಯೆ ಇರುವುದಿಲ್ಲ. ಇದಕ್ಕೆ ನ.ಪಂ. ಸದಸ್ಯರ ಮತ್ತು ವಾಟರ್ ಮ್ಯಾನ್ಗಳ ಜೊತೆ ಸಭೆ ನಡೆಸಬೇಕು ಎಂದು ಸದಸ್ಯ ಕೆ.ಎಸ್.ಉಮ್ಮರ್ ಹೇಳಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ನಗರದ ಆಡಳಿತಕ್ಕೆ ವಿರೋಧ ಪಕ್ಷ ಸಂಪೂರ್ಣ ಸಹಕಾರ ನೀಡಿದೆ. ಕಳೆದ 8 ವರ್ಷದಿಂದ ಬಾಕಿ ಇದ್ದ ತ್ಯಾಜ್ಯ ರಾಶಿ ವಿಲೇವಾರಿ ಆಗುತ್ತಿದೆ. ನೀರಿನ ನಿರ್ವಹಣೆ, ನೀರಿನ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗುವುದು. ಅಲ್ಲದೇ ನೀರಿನ ತೆರಿಗೆ ಸಂಗ್ರಹ ಹಲವು ವರ್ಷಗಳಿಂದ ಬಾಕಿ ಇದೆ. ಇದಕ್ಕಾಗಿ ನೀರಿನ ಅದಾಲತ್ ಮಾಡಲಾಗುವುದು ಎಂದರು.
ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಆಡಳಿತ ಹಾಗು ವಿರೋಧ ಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.