ಸುಳ್ಯ: ಮಳೆಗಾಲ ಆರಂಭವಾದೊಡನೆ ತರಕಾರಿ ಬೆಲೆಯೂ ಗಗನಕ್ಕೇರಿದ್ದು ಟೊಮೆಟೊ ದರ ಶತಕ ದಾಟಿ ಮುನ್ನಡೆದಿದೆ.ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ಹಲವಾರು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು ಮಾರುಕಟ್ಟೆಗಳಲ್ಲಿ 100 ರೂ. ಗಡಿಯನ್ನು ದಾಟಿದೆ.
ಸುಳ್ಯ ನಗರದಲ್ಲಿ ಟೊಮೆಟೊ ದರ ಸದ್ಯ ಶತಕ ಬಾರಿಸಿಲ್ಲ. ಜೂ.27ರಂದು ಸುಳ್ಯದಲ್ಲಿ ಟೊಮೆಟೊ ದರ ಕೆಜಿಗೆ 80 ಇತ್ತು.ಕಳೆದ ಕೆಲವು ದಿನಗಳಿಂದ
ಸುಳ್ಯದಲ್ಲಿ ಟೊಮೆಟೊ70- 80 ರೂ. ಎಲ್ಲಾ ತರಕಾರಿಗಳು, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. 10-15 ದಿನದ ಮೊದಲು ಕಿಲೋಗ್ರಾಂಗೆ 20ರಿಂದ 30 ರೂ. ಧಾರಣೆಯಿದ್ದ ಟೊಮೆಟೊ ದರವು ಏಕಾ ಏಕಿ 80-100 ರೂ.ಗೆ ಏರಿದೆ.ಮಾರುಕಟ್ಟೆಗೆ ಟೊಮೆಟೊ ಸರಬರಾಜು ಕಡಿಮೆಯಾಗಿರುವುದು ಟೊಮೆಟೊ ಬೆಲೆ ಏರಲು ಕಾರಣವಾಗಿದೆ.ಭಾರಿ ಮಳೆಯಿಂದಾಗಿ ಟೊಮೆಟೊ ಉತ್ಪಾದನೆಗೆ ಸಮಸ್ಯೆ ತಲೆದೋರಿದೆ. ಟೊಮೆಟೊ
ಕಾರ್ಟೂನ್: ದಿನೇಶ್ ಕುಕ್ಕುಜಡ್ಕ
ಅಧಿಕವಾಗಿ ಬೆಳೆಯುವ ರಾಜ್ಯಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಅದರ ಪೂರೈಕೆ ಇಳಿಮುಖವಾಗಿದೆ ಎನ್ನಲಾಗುತಿದೆ.
ಕಳೆದ ಕೆಲವು ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ ಉಂಟಾಗಿದ್ದು ಇದರಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದೆ ಮತ್ತು ಮಾರುಕಟ್ಟೆಗೆ ಅವುಗಳ ಪೂರೈಕೆಯಲ್ಲಿ ಕೊರತೆಯುಂಟಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಟೊಮೆಟೊ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ವರದಿಯಿದೆ. ಒಟ್ಟಿನಲ್ಲಿ ಟೊಮೆಟೊ ಉತ್ಪಾದನೆ ಕುಂಠಿತಗೊಂಡಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಇದರಿಂದ ಬೆಲೆ ಏರಿಕೆಯ ಬರೆ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ. ಒಂದೂವರೆ ವರ್ಷದ ಹಿಂದೆ ಟೊಮೆಟೊ ಬೆಲೆ ನೂರರ ಗಡಿ ದಾಟಿತ್ತು. ಬಳಿಕ ಇಳಿಮುಖವಾದ ಟೊಮೆಟೊ ದರ 20-30 ರ ಆಸು ಪಾಸಿನಲ್ಲಿತ್ತು. ಬೆಂಗಳೂರು, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಹಾಗೂ ರಾಜ್ಯಗಳಲ್ಲಿ ಟೊಮೆಟೊ ದರ ನೂರು ದಾಟಿದೆ.
ಸುಳ್ಯದಲ್ಲಿ ವಿವಿಧ ತರಕಾರಿ ದರ ಗಗನಮುಖಿ:
ಟೊಮೆಟೊ ಮಾತ್ರವಲ್ಲದೆ ಬಹುತೇಕ ಎಲ್ಲಾ ತರಕಾರಿ ದರವೂ ಏರು ಗತಿಯಲ್ಲಿದೆ. ಸುಳ್ಯದ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ 80 ಇದ್ದರೆ ಬೀನ್ಸ್ ದರ 100 ರೂ ಆಗಿದೆ. ಮೆಣಸಿನ ದರ 100, ಕೊತ್ತಂಬರಿ ದರ 150, ಶುಂಠಿ ದರ 200, ಬೀಟ್ರೂಟ್ 60, ಮುಳ್ಳು ಸೌತೆ 40 ರೂಗೆ ಏರಿಕೆ ಆಗಿದೆ ಎಂದು ಗಾಂಧಿನಗರದ ಸೂಪರ್ ವೆಜಿಟೇಬಲ್ ಮಾಲಕ ಯಾಹ್ಯಾ ಮಾಹಿತಿ ನೀಡಿದ್ದಾರೆ.