ನವದೆಹಲಿ: ರಾಕೆಟ್ ವೇಗದಲ್ಲಿ ಏರುತ್ತಿರುವ ಟೊಮೆಟೊ ಕೆಜಿ ದರ ಉತ್ತರ ಭಾರತದ ವಿವಿಧ ನಗರಗಳಲ್ಲಿ ದ್ವಿಶತಕ ಬಾರಿಸಿದೆ.
ದೇಶದಲ್ಲಿ ಒಂದೆಡೆ ಭಾರೀ ಮಳೆಯಾಗುತ್ತಿದ್ದು,ಮತ್ತೊಂದೆಡೆ ತರಕಾರಿಗಳ ದರಗಳಲ್ಲಿ ಭಾರೀ ಏರಿಕೆ ಕಾಣುತ್ತಿದೆ.ಟೊಮೆಟೊ ದರವು ಐತಿಹಾಸಕ ದಾಖಲೆ ಸೃಷ್ಟಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ
ಹಲವಾರು ನಗರಗಳಲ್ಲಿ ಟೊಮೆಟೊ ದರವು ಪ್ರತಿ ಕೆಜಿಗೆ 200 ಕ್ಕೆ ತಲುಪಿದೆ ಎಂದು ವರದಿಯಾಗಿದೆ. ನಿರಂತರ ಮಳೆಯು ಟೊಮೆಟೊ ಪೂರೈಕೆಗೆ ಅಡ್ಡಿಪಡಿಸಿದೆ. ಟೊಮೊಟೊ ಅಲ್ಲದೇ ಇತರ ತರಕಾರಿಗಳ ದರಗಳು ಸಹ ಏರಿಕೆಯಾಗಿವೆ.ಟೊಮೊಟೊ ಉತ್ಪಾದಿಸುವ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಪ್ರದೇಶಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಬೆಳೆಗಳು ಕೊಳೆಯಲು ಆರಂಭಿಸಿವೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸೋಮವಾರದಂದು ಅಖಿಲ ಭಾರತ ಸರಾಸರಿ ಚಿಲ್ಲರೆ ಟೊಮೆಟೊ ದರವು ಪ್ರತಿ ಕೆಜಿಗೆ 104.38 ರಷ್ಟಿತ್ತು. ಗರಿಷ್ಠ ಬೆಲೆಯು ಕೆಜಿಗೆ 200 ರೂ. ಆಗಿದೆ. ಕೋಲ್ಕತ್ತಾದಲ್ಲಿ ಕೆಜಿಗೆ 149 ರೂ., ಮುಂಬೈನಲ್ಲಿ ಕೆಜಿಗೆ 135 ರೂ., ಚೆನ್ನೈನಲ್ಲಿ 123 ರೂ., ಮತ್ತು ದೆಹಲಿಯಲ್ಲಿ 200 ರೂ. ಎಂದು ಅಂಕಿಅಂಶಗಳು ತಿಳಿಸಿವೆ.
‘ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಟೊಮೆಟೊ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯ ಉಂಟಾಗಿದೆ. ಭಾರೀ ಮಳೆ ಮುಂದುವರಿದರೆ, ಶೀಘ್ರದಲ್ಲೇ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.