ಸುಳ್ಯ: ಕಳೆದ ಒಂದೂವರೆ ತಿಂಗಳಿನಿಂದ ಭಾರೀ ದರ ಏರಿಕೆಯಿಂದ, ಕೆಜಿ ಟೊಮೆಟೋಕ್ಕೆ ಶತಕ, ದ್ಚಿಶತಕ, ತ್ರಿಶತಕದವರೆಗೂ ಏರಿ ಸ್ಟಾರ್ ವ್ಯಾಲ್ಯು ಪಡೆದಿದ್ದ ಕೆಂಪು ಹಣ್ಣಿನ ದರ ಮೆಲ್ಲನೆ ಇಳಿಯುತಿದೆ. ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ, ಭಾರೀ ಸುದ್ದಿಯಾಗಿದ್ದ ಟೊಮೆಟೊ ದರ ಏರಿಕೆ ಗ್ರಾಹಕರ ಕೈ ಸುಟ್ಟಿದ್ದರೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಬೀರಿತ್ತು. ಇದೀಗ ಟೊಮೆಟೊ ದರ ಇಳಿಯುತಿದೆ. 3 ದಿನಗಳಿಂದ ಇಳಿಕೆಯ
ಹಾದಿಯಲ್ಲಿದೆ ಎನ್ನುತ್ತಾರೆ ವ್ಯಾಪಾರಿಗಳು. ಸುಳ್ಯದ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೆಟೊ ದರ 60 ರೂ ಇದೆ. ಕೆಲವು ತರಕಾರಿ ಅಂಗಡಿಗಳು 100 ರೂಗೆ 2 ಕೆಜಿ ಟೊಮೆಟೊ ಎಂದು ಘೋಷಿದೆ. ಒಂದೂವರೆ ತಿಂಗಳಿಗಿಂತ ಹೆಚ್ಚು ಸಮಯ ಶತಕ ಭಾರಿಸಿದ್ದ ಟೊಮೆಟೊ ದರ 120-130ರವರೆಗೂ ಏರಿತ್ತು. ಈಗ ಕಡಿಮೆಯಾಗುತ್ತಾ 100, 80, ಈಗ 60ಕ್ಕೆ ಇಳಿದಿದೆ. ಕೆಲವೇ ದಿನದಲ್ಲಿ ಟೊಮೆಟೊ ದರ ಇನ್ನಷ್ಟು ಕಡಿಮೆಯಾಗಿ ಮಾಮೂಲಿ ದರಕ್ಕೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಗಾಂಧಿನಗರ ಸೂಪರ್ ವೆಜಿಟೇಬಲ್ನ ಯಾಹ್ಯಾ.
ಬೆಲೆ ಏರಿಕೆಯಿಂದ ಟೊಮೆಟೊ ಬಳಕೆಯೂ ಇಳಿದಿತ್ತು. ಕೆಜಿ ಟೊಮೆಟೊ
ಖರೀದಿಸುವವರು ಪ್ರಮಾಣವನ್ನು ಅರ್ಧ ಕೆಜಿಗೆ ಇಳಿಸಿದ್ದರು.ಮನೆಗಳಲ್ಲಿಯೂ ಟೊಮೆಟೊ ಬಳಕೆಯ ಸಂಖ್ಯೆ ಇಳಿದಿತ್ತು. ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿ ಬಹುತೇಕ ರಾಜ್ಯಗಳಲ್ಲಿ ಕೆಜಿ ಟೊಮೆಟೊ 100 ರೂ. ಗಡಿಯನ್ನು ದಾಟಿತ್ತು.ಕೆಲವೆಡೆ 200, 250, 300ರವರೆಗೂ ಏರಿತ್ತು.
ಜೂನ್ ಮಧ್ಯದಲ್ಲಿ 20ರಿಂದ 30 ರೂ. ಧಾರಣೆಯಿದ್ದ ಟೊಮೆಟೊ ದರವು ಜೂನ್ ಕೊನೆಯ ವಾರ ಏಕಾ ಏಕಿ 80-100 ರೂ.ಗೆ ಏರಿತ್ತು. ಟೊಮೆಟೊ ಮಾತ್ರವಲ್ಲದೆ ಎಲ್ಲಾ ತರಕಾರಿಗಳು, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದರು. ಮಾರುಕಟ್ಟೆಗೆ ಟೊಮೆಟೊ ಸರಬರಾಜು ಕಡಿಮೆಯಾಗಿರುವುದು ಟೊಮೆಟೊ ಬೆಲೆ ಏರಲು ಕಾರಣವಾಗಿದೆ. ಟೊಮೆಟೊ ಅಧಿಕವಾಗಿ ಬೆಳೆಯುವ ರಾಜ್ಯಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಅದರ ಪೂರೈಕೆ ಇಳಿಮುಖವಾದ ಕಾರಣ ದರ ಏರಲು ಕಾರಣ ಎನ್ನಲಾಗುತಿದೆ.
ಸುಮಾರು ಎರಡು ವರ್ಷದ ಹಿಂದೆ ಟೊಮೆಟೊ ಬೆಲೆ ನೂರರ ಗಡಿ ದಾಟಿತ್ತು. ಬಳಿಕ ಇಳಿಮುಖವಾದ ಟೊಮೆಟೊ ದರ 20-30 ರ ಆಸು ಪಾಸಿನಲ್ಲೇ ಇತ್ತು. ಬಳಿಕ ದರ ಏರಿ ಇದೀಗ ಮತ್ತೆ ಇಳಿಕೆಯ ಹಾದಿಯಲ್ಲಿದೆ.