ಚೆನ್ನೈ:ತಮಿಳುನಾಡಿನ ಎನ್ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮಗೊಂಡಿದ್ದು, ಎಐಎಡಿಎಂಕೆ 169 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. 65 ಕ್ಷೇತ್ರಗಳು ಮೈತ್ರಿ ಪಕ್ಷಗಳ ಪಾಲಾಗಿದ್ದು, ಬಿಜೆಪಿಗೆ 27, ಪಿಎಂಕೆಗೆ 18 ಸೀಟುಗಳು, ಟಿ.ಟಿ.ವಿ ದಿನಕರನ್ ಅವರ ಎಎಂಎಂಕೆಗೆ 11 ಕ್ಷೇತ್ರಗಳು ಹಂಚಿಕೆಯಾಗಿವೆ.ಕನ್ಯಾಕುಮಾರಿ ಕ್ಷೇತ್ರದ ವ್ಯಾಪ್ತಿಯ
6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 4, ತಮಿಳು ಮಾನಿಲ ಕಾಂಗ್ರೆಸ್ಗೆ (ಟಿಎಂಸಿ) ಒಂದು ಕ್ಷೇತ್ರ ನೀಡಿದೆ.ಚೆನ್ನೈನ 16 ಕ್ಷೇತ್ರಗಳ ಪೈಕಿ 13 ಕ್ಷೇತ್ರ ಉಳಿಸಿಕೊಂಡಿರುವ ಎಐಎಡಿಎಂಕೆ, ಮಾಯಲಾಪುರ್ ಕ್ಷೇತ್ರವನ್ನು ಬಿಜೆಪಿಗೆ, ಸೈದ್ಪೇಟ್ ಕ್ಷೇತ್ರವನ್ನು ಎಎಂಎಂಕೆಗೆ, ಪೆರಂಬೂರ್ ಕ್ಷೇತ್ರವನ್ನು ಪಿಎಂಕೆಗೆ ನೀಡಿದೆ.
ಪೆರಂಬೂರ್ ಕ್ಷೇತ್ರ ಡಿಎಂಕೆ ಭದ್ರಕೋಟೆ ಎನಿಸಿದೆ. ಇದೇ ಕ್ಷೇತ್ರದಿಂದ ಟಿವಿಕೆ ಸಂಸ್ಥಾಪಕ, ನಟ ವಿಜಯ್ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ಕೊಯಮತ್ತೂರು ಮತ್ತು ಮಧುರೈ ಜಿಲ್ಲೆಗಳಲ್ಲಿ ಬಿಜೆಪಿ ತಲಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಡಿಎಂಕೆ ಸಚಿವರು ಪ್ರತಿನಿಧಿಸುತ್ತಿರುವ 14 ಕ್ಷೇತ್ರಗಳನ್ನು ಎಐಎಡಿಎಂಕೆ ತನ್ನ ಮೈತ್ರಿ ಪಕ್ಷಗಳಿಗೆ ನೀಡಿದೆ.
ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಸ್ಪರ್ಧಿಸಲು ಬಯಸಿದ್ದ ಸಿಂಗಾನಲ್ಲೂರು ಕ್ಷೇತ್ರವನ್ನು ಬಿಟ್ಟುಕೊಡಲು ಎಐಎಡಿಎಂಕೆ ನಿರಾಕರಿಸಿದೆ.
ಬಿಜೆಪಿ ಹಾಲಿ ಶಾಸಕರಿದ್ದ ಕೊಯಮತ್ತೂರು (ದಕ್ಷಿಣ) ಕ್ಷೇತ್ರದ ಬದಲು ಕೊಯಮತ್ತೂರು (ಉತ್ತರ) ಕ್ಷೇತ್ರವನ್ನು ಆ ಪಕ್ಷಕ್ಕೆ ನೀಡಲಾಗಿದೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ತಿರುನಲ್ವೇಲಿ ಬದಲಿಸಿ ಸತ್ತೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು, ಈ ಕ್ಷೇತ್ರವನ್ನೇ ಬಿಜೆಪಿಗೇ ನೀಡಲಾಗಿದೆ. ಏಪ್ರಿಲ್ 23ರಂದು ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಎದುರಾಳಿ ಡಿಎಂಕೆಗಿಂತಲೂ ಎಐಎಡಿಎಂಕೆ ಮುಂದಿದೆ. ಬುಧವಾರ 23 ಕ್ಷೇತ್ರಗಳಿಗೆ ಎಐಎಡಿಎಂಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಹಲವು ಮಾಜಿ ಸಚಿವರ ಹೆಸರು ಪಟ್ಟಿಯಲ್ಲಿದೆ. ಮಾಜಿ ಮುಖ್ಯಮಂತ್ರಿ ಹಾಲಿ ವಿಪಕ್ಷ ನಾಯಕ ಪಳನಿಸ್ವಾಮಿ ಅವರು ಎಡಪ್ಪಾಡಿ ಕ್ಷೇತ್ರದಿಂದ ಆರನೇ ಬಾರಿ ಮರು ಆಯ್ಕೆ ಬಯಸಿದ್ದಾರೆ.









