ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಏ.3 ರಂದು ಬಿಡುಗಡೆ ಮಾಡಿದೆ. ಸೀಟು ಹಂಚಿಕೆ ಮತ್ತು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಪಕ್ಷದೊಳಗೆ ನಡೆಯುತ್ತಿದ್ದ ಚರ್ಚೆಯ ಬಳಿಕ ಪಟ್ಟಿ ಹೊರಬಿದ್ದಿದೆ. ಈ ಪಟ್ಟಿಯಲ್ಲಿ
ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಹೆಸರು ಕೈ ಬಿಡಲಾಗಿದೆ. ಇನ್ನುಳಿದಂತೆ ಪಕ್ಷದ ಪ್ರಮುಖ ನಾಯಕರಿಗೆ ಮಣೆ ಹಾಕಲಾಗಿದ್ದು, ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳು ಮೈಲಾಪುರ: ತಮಿಳಿಸೈ ಸೌಂದರರಾಜನ್, ಕೊಯಮತ್ತೂರು (ಉತ್ತರ): ವನತಿ ಶ್ರೀನಿವಾಸನ್ ಅವನಾಶಿ: ಎಲ್. ಮುರುಗನ್,ಸತ್ತೂರು: ನೈನಾರ್ ನಾಗೇಂದ್ರನ್, ಅವಡಿ ಕ್ಷೇತ್ರದಿಂದ ಎಂ. ರಾಜಸಿಂಹ ಮಹೇಂದ್ರ, ತಿರುವಣ್ಣಾಮಲೈನಿಂದ ಸಿ. ಏಳುಮಲೈ ಮತ್ತು ನಾಗರ್ಕೋಯಿಲ್ನಿಂದ ಎಂ.ಆರ್. ಗಾಂಧಿ ಅವರಿಗೆ ಟಿಕೆಟ್ ನೀಡಲಾಗಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವಿಜಯಧರಣಿ ಅವರಿಗೆ ವಿಲವಂಕೋಡ್ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ಪದ್ಮನಾಭಪುರಂನಿಂದ ಪಿ. ರಮೇಶ್ ಮತ್ತು ತಿರುಚೆಂದೂರಿನಿಂದ ಕೆ.ಆರ್.ಎಂ.ರಾಧಾಕೃಷ್ಣನ್ ಕಣಕ್ಕಿಳಿಯಲಿದ್ದಾರೆ. ಕೆಲವು ಕ್ಷೇತ್ರಗಳನ್ನು ಮೈತ್ರಿಕೂಟದ ಪಕ್ಷಗಳಿಗೆ ಬಿಟ್ಟುಕೊಟ್ಟಿರುವುದನ್ನು ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿತ್ತು.
ವಿಶೇಷವಾಗಿ ಅಣ್ಣಾಮಲೈ ಅವರ ಬೆಂಬಲಿಗರು ಅವರಿಗೆ ಟಿಕೆಟ್ ಸಿಗದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಅಣ್ಣಾಮಲೈ ಅವರಂತಹ ಫೈರ್ಬ್ರ್ಯಾಂಡ್ ನಾಯಕನನ್ನು ಕಣದಿಂದ ಹೊರಗಿಟ್ಟಿರುವುದು ಪಕ್ಷಕ್ಕೆ ವರವಾಗಲಿದೆಯೇ ಅಥವಾ ಶಾಪವಾಗಲಿದೆಯೇ ಎಂಬುದು ಫಲಿತಾಂಶದ ನಂತರವಷ್ಟೇ ತಿಳಿಯಲಿದೆ.









