ಸುಳ್ಯ: ಹತ್ಯೆಗೀಡಾದ ಯುವಕರ ಕುಟಂಬಕ್ಕೆ 25 ಲಕ್ಷ ರೂ ಪರಿಹಾರ ವಿತರಿಸುವುದರ ಜೊತೆಗೆ ಅವರ ಕುಟುಂಬದ ಓರ್ವರಿಗೆ ಸರಕಾರ ಕೆಲಸ ನೀಡುವುದಾಗಿ ಭರವಸೆ ನೀಡಿರುವ ಸಿದ್ದರಾಮಯ್ಯ ಸರಕಾರ ಸರ್ವರಿಗೂ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾಕಾರಗೊಳಿಸಿದೆ ಎಂದು ರಾಜ್ಯ ಮುಸ್ಲಿಂ ಯುವಜನ ಪರಿಷತ್ನ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಮುಂದೆ ಯಾವುದೇ ರೀತಿಯ ಕೋಮು ಸಂಘರ್ಷಗಳು ಉಂಟಾಗದಂತೆ ಮತ್ತು ಸಮಾಜದಲ್ಲಿ ಶಾಶ್ವತ ಶಾಂತಿ, ನೆಮ್ಮದಿ ನೆಲೆಯಾಗಲು ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಅವರು. ಮುಸ್ಲೀಂ ಸಮುದಾಯದ ಹಲವು ಸೌಲಭ್ಯಗಳನ್ನು ಹಿಂದಿನ ಸರಕಾರ ಕಡಿತ ಮಾಡಿತ್ತು. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸೇರಿದಂತೆ ಹಿಂದೆ ಇದ್ದ ಎಲ್ಲಾ ಸೌಲಭ್ಯಗಳನ್ನು ಸರಕಾರ ಪುನಃ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸುಳ್ಯ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ನ ಮುಖಂಡರ ಉಚ್ಚಾಟನೆ ಮಾಡಿದ ಹಾಗೂ ಕೆಲವು ಮುಖಂಡರಿಗೆ ಕೆಪಿಸಿಸಿ ಶೋಕಾಸ್ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಇದು ಕೆಪಿಸಿಸಿ ಶಿಸ್ತು ಸಮಿತಿ ಕ್ರಮ ಕೈಗೊಂಡಿದೆ. ಈ ಬಗ್ಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲರೂ ಸಂಯಮನ ಪಾಲಿಸಬೇಕು. ಎಲ್ಲವೂ ಸರಿಯಾಗಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮೂಸಾ ಕುಂಞಿ ಪೈಂಬೆಚ್ಚಾಲ್, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಆರ್.ಬಿ.ಬಶೀರ್ ಉಪಸ್ಥಿತರಿದ್ದರು.