ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ನಿರಂತರವಾಗಿ ಸುರಿದ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರ ನದಿ ಮೈದುಂಬಿ ಹರಿಯುತ್ತಿದೆ. ಸ್ನಾನಘಟ್ಟವು ಸಂಪೂರ್ಣ ಜಲಾವೃತ್ತವಾಗಿದೆ.ನದಿಯು ಮೈದುಂಬಿ ಹರಿಯುತ್ತಿರುವುದರಿಂದ ಭಕ್ತಾಧಿಗಳು ನದಿಗೆ ಇಳಿಯದಂತೆ ಸೂಚನೆ
ನೀಡಲಾಗಿದೆ. ನಿರಂತರವಾಗಿ ಬಾರೀ ಮಳೆಯು ಗಾಳಿಯೊಂದಿಗೆ ಬರುತ್ತಿರುವುದರಿಂದ ಅಲ್ಲಲ್ಲಿ ಮರ ಉರುಳಿ ಬಿದ್ದಿದೆ.
ಕುಮಾರಧಾರದಲ್ಲಿನ ಶ್ರೀ ದೇವರ ಜಳಕದ ಕಟ್ಟೆಯು ಜಲಾವೃತವಾಗಿದೆ. ಭಕ್ತರ ಅನುಕೂಲಕ್ಕಾಗಿ ಕುಮಾರಧಾರ ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯವು ನೀರಿನಿಂದ ಆವೃತ್ತವಾಗಿದೆ. ಇಲ್ಲಿರುವ ಡ್ರೆಸ್ಸಿಂಗ್ ರೂಂ ನೀರಿನಿಂದ ಆವೃತಗೊಂಡಿತ್ತು. ಮುಂಜಾನೆಯಿಂದಲೇ ಭಾರೀ ಪ್ರಮಾಣದ

ಗಾಳಿ ಮಳೆ ಬಂದಿತ್ತು. ಇದರಿಂದಾಗಿ ಮತ್ತೆ ನದಿ ತೊರೆ, ಹೊಳೆಗಳಲ್ಲಿ ನೀರಿನ ಮಟ್ಟ ಅಧಿಕವಾಗುತ್ತಾ ಸಾಗಿದೆ.ಕುಮಾರಧಾರ ನದಿಯ ಉಪನದಿಯಾದ ದರ್ಪಣತೀರ್ಥ ನದಿಯು ತುಂಬಿ ಹರಿಯುತ್ತಿದೆ. ನೀರಿನ ಹರಿವು ಅಧಿಗೊಂಡ ಕಾರಣ ಸಮೀಪದ ಕೃಷಿ ತೋಟಗಳಿಗೆ ನೀರು ನುಗ್ಗಿತು. ಇದರಿಂದಾಗಿ ಅನೇಕ ಫಲವಸ್ತುಗಳು ಹಾಗೂ ಕೃಷಿಕರು ಹಾಕಿದ್ದ ಗೊಬ್ಬರ ನೀರು ಪಾಲಾಯಿತು.ಗ್ರಾಮೀಣ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿದೆ.ಹರಿಹರ ಹೊಳೆಯಲ್ಲಿ ಬಾರೀ ಪ್ರವಾಹ ಬಂದಿದೆ. ಗ್ರಾಮೀಣ ಪ್ರದೇಶವಾದ ಬಾಳುಗೋಡು, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು,ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ ಮೊದಲಾದೆಡೆ ನಿರಂತರ ಮಳೆಯಾದುದರಿಂದ ಈ ಪರಿಸರದಲ್ಲಿ ಹರಿಯುವ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಹರಿಯುತ್ತಿರುವ ಬಾರೀ ಮಳೆ ಮತ್ತು ನದಿಗಳು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.