ಅಜ್ಜಾವರ: ತುಳಸಿ ಗಿಡದಲ್ಲಿ ದಾಸವಾಳ ಹೂವು ಅರಳುತ್ತದೆಯೇ… ? ಎಂದು ಕೇಳಿದರೆ ಅರಳಿದೆ ಎಂದು ಅಜ್ಜಾವರದ ಶಾಂತಿಮಜಲಿನ ಈ ಮನೆಯವರು ಉತ್ತರಿಸಬಹುದು.. ಯಾಕೆಂದರೆ ಅಜ್ಜಾವರ ಗ್ರಾಮದ ಶಾಂತಿಮಜಲಿನ ಭವಾನಿ ಅವರ ಮನೆಯಂಗಳದ ತುಳಸಿ ಗಿಡದಲ್ಲಿ ಅರಳುತ್ತಿರುವುದು ದಾಸವಾಳ ಹೂವು..! ಒಂದಲ್ಲಾ.. ಎರಡಲ್ಲ.. ತುಳಸಿ ಗಿಡದಲ್ಲಿ 3 ದಾಸವಾಳ ಹೂವುಗಳು ಅರಳಿದಂತೆ ಕಂಡು ಬಂದಿದೆ.ಒಂದು ವಾರದಲ್ಲಿ 3ನೇ ಬಾರಿಗೆ
ಈ ರೀತಿ ಹೂವು ಅರಳಿದಂತೆ ಕಂಡು ಬಂದಿದೆ ಎಂದು ಮನೆಯವರು ಹೇಳುತ್ತಾರೆ. ತುಳಸಿ ಗಿಡದ ದಾಸವಾಳ ನೋಡುಗರಲ್ಲಿ ಕುತೂಹಲ ಮೂಡಿಸುತ್ತಿದೆ. ತುಳಸಿ ಗಿಡದಲ್ಲಿ ಹೂವು ಮಾತ್ರವಲ್ಲದೆ ದಾಸವಾಳ ಹೂವಿನ ಮೊಗ್ಗು ಕೂಡ ಕಂಡು ಬಂದಿದ್ದು ಇನ್ನಷ್ಟು ದಾಸವಾಳ ಹೂವು ಅರಳಬಹುದೇ ಎಂಬ ಕುತೂಹಲ ಮೂಡಿದೆ.
ಸಾಮಾನ್ಯವಾಗಿ ಗಿಡ ಕಸಿ ಮಾಡಿದರೆ ಈ ರೀತಿ ತುಳಸಿ ಗಿಡದಲ್ಲಿ ದಾಸವಾಳ ಅರಳುವ ಸಾಧ್ಯತೆ ಇದೆ. ಆದರೆ ಇವರ ಮನೆಯಲ್ಲಿ ಇವರೇನು ಹಾಗೆ ಕಸಿ ಕಟ್ಟಿಲ್ಲ.. ತನ್ನಷ್ಟಕ್ಕೇ ಈ ರೀತಿ ಕಂಡು ಬಂದಿದೆ ಎನ್ನುತ್ತಾರೆ ಅವರು. ತುಳಸಿ ಗಿಡದ ಸಮೀಪದಲ್ಲಿಯೇ ದಾಸವಾಳ ಹೂವಿನ ಗಿಡಗಳು ಇದೆ.
ಆದುದರಿಂದ ತುಳಸಿ ಗಿಡ ಹಾಗೂ ದಾಸವಾಳ ಪರಾಗಸ್ಪರ್ಶ ಆಗಿರುವ ಕಾರಣ ಈ ರೀತಿಯ ವಿಸ್ಮಯ ಉಂಟಾಗಿರಬಹುದೇ ಎಂಬ ಕುತೂಹಲ ಮೂಡಿದೆ. ಸಸ್ಯ ಶಾಸ್ತ್ರ ತಜ್ಞರು ಪರಿಶೀಲನೆ ನಡೆಸಿದಲ್ಲಿ ಈ ಕುರಿತು ಸ್ಪಷ್ಟನೆ ಸಿಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ತುಳಸಿ ಗಿಡದಲ್ಲಿ ದಾಸವಾಳ ಅರಳಿರುವುದು ನೋಡಲು ಹಲವು ಮಂದಿ ಕುತೂಹಲಿಗಳು ಆಗಮಿಸುತ್ತಿದ್ದಾರೆ. ಅಜ್ಜಾವರ ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಹಾಗೂ ಸದಸ್ಯರು ಆಗಮಿಸಿ ಇದನ್ನು ವೀಕ್ಷಿಸಿ ಈ ರೀತಿ ತುಳಸಿ ಗಿಡದಲ್ಲಿ ದಾಸವಾಳ ಅರಳಿರುವ ಮಾಹಿತಿ ನೀಡಿದ್ದಾರೆ. ಸದಸ್ಯರಾದ ಹರಿಣಿ, ಶ್ರೀಲತಾ ಶಾಂತಿಮಜಲು ಮತ್ತಿತರರು ಉಪಸ್ಥಿತರಿದ್ದರು.