ಹೊಸದಿಲ್ಲಿ: ಬಿಜೆಪಿಯು ತ್ರಿಪುರಾದಲ್ಲಿ ಬಹುಮತ ಗಳಿಸಲಿದೆ ಮತ್ತು ನಾಗಾಲ್ಯಾಂಡ್ನಲ್ಲಿ ಬಿಜೆಪಿ ಮಿತ್ರಕೂಟವು ಅಧಿಕಾರಕ್ಕೆ ಬರಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿದೆ. ಮೇಘಾಲಯದಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಕೋನ್ರಾಡ್ ಸಂಗ್ಮಾರ ಎನ್ಪಿಪಿ (ನ್ಯಾಶನಲ್ ಪೀಪಲ್ಸ್ ಪಾರ್ಟಿ) ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.ಎರಡು ಮತದಾನೋತ್ತರ ಸಮೀಕ್ಷೆಗಳ ಸಾರದ ಪ್ರಕಾರ,
ತ್ರಿಪುರಾದಲ್ಲಿ ಬಿಜೆಪಿಯು 35 ಸ್ಥಾನಗಳನ್ನು ಪಡೆಯಬಹುದಾಗಿದೆ. 60 ಸ್ಥಾನಗಳ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 31 ಸ್ಥಾನಗಳ ಅಗತ್ಯವಿದೆ. ನಾಗಾಲ್ಯಾಂಡ್ ನಲ್ಲಿ ಬಿಜೆಪಿ-ಎನ್ಡಿಪಿಪಿ (ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ) ಮಿತ್ರಕೂಟವು ಒಟ್ಟು 60 ಸ್ಥಾನಗಳ ಪೈಕಿ 35-43 ಸ್ಥಾನಗಳನ್ನು ಗೆಲ್ಲಬಹುದಾಗಿದೆ ಎಂದು ಅಂದಾಜಿಸಿದೆ.
ಮೇಘಾಲಯದಲ್ಲಿ, ಕೋನ್ರಾಡ್ ಸಂಗ್ಮಾರ ಎನ್ಪಿಪಿ 21-26 ಸ್ಥಾನಗಳೊಂದಿಗೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. 2018ರ ಚುನಾವಣೆಯಲ್ಲಿ, ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 6-11 ಸ್ಥಾನಗಳನ್ನು ಪಡೆಯಬಹುದು ಎಂದು ಅದು ನಿರೀಕ್ಷಿಸಿದೆ. ಹೊಸದಾಗಿ ಪ್ರವೇಶ ಪಡೆದಿರುವ ತೃಣಮೂಲ ಕಾಂಗ್ರೆಸ್ 8-13 ಸ್ಥಾನಗಳನ್ನು ಗಳಿಸಬಹುದಾಗಿದೆ ಎಂದು ವಿವಿಧ ಸಮೀಕ್ಷೆಗಳು ಹೇಳಿವೆ.
ಮೂರು ರಾಜ್ಯಗಳ ಮತಗಳ ಎಣಿಕೆ ಮಾ.2 ರಂದು ನಡೆಯಲಿದೆ.