ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ಆಯುಧ ತೋರಿಸಿ ಬೆದರಿಕೆ ಒಡ್ಡಿದ ಘಟನೆ ಮಂಗಳೂರು ನಗರದ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ತಡರಾತ್ರಿ 11.30 ರ ಸುಮಾರಿಗೆ ನಡೆದಿದೆ.
ಗುರುವಾರ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಶಾಸಕ ಹರೀಶ್
ಪೂಂಜಾ ಅವರು ಸರ್ಕ್ಯೂಟ್ ಹೌಸ್ ನಲ್ಲಿ ಸಭೆ ಮುಗಿಸಿ ಬೆಳ್ತಂಗಡಿ ಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.ತನ್ನ ಕಾರು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿದ್ದ ಹರೀಶ್ ಪೂಂಜಾ ಅವರನ್ನು ನಗರದ ಪಡೀಲ್ ನಿಂದ ಫರಂಗಿಪೇಟೆ ಯವರೆಗೆ ಕಾರಿನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳ ತಂಡ ಫರಂಗಿಪೇಟೆಯಲ್ಲಿ ಕಾರು ಅಡ್ಡಗಟ್ಟಿ ಮಾರಕಾಯುಧ ತೋರಿಸಿ ಅವ್ಯಾಚ್ಯವಾಗಿ ಬೈದು ಪರಾರಿಯಾಗಿದೆ. ಈ ಕುರಿತು ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.