ಸುಳ್ಯ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ವಿಭಾಗದ ನೆಡುತೋಪುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬಾಕಿ ಇರುವ ಬೋನಸ್ನ್ನು ತುರ್ತಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತೋಟ ತೊಲಿಳಾಲರ್ ಸಂಘದ ವತಿಯಿಂದ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ.ಮನವಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗುಣಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತೋಟ ತೊಲಿಳಾಲರ್ ಸಂಘದ
ಅಧ್ಯಕ್ಷ ಚಂದ್ರಲಿಂಗಂ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಮಿಕರಿಗೆ 2021- 22ನೇ ಸಾಲಿನ ಬೋನಸ್ ಶೇ.20ರಲ್ಲಿ ಶೇ.8.3 ಮಾತ್ರ ದೊರೆತಿದ್ದು ಬಾಕಿ ಇರುವ ಬೋನಸ್ನ್ನು ತುರ್ತಾಗಿ ನೀಡಬೇಕೆಂದು ಹಾಗೂ 2022-23ನೇ ಸಾಲಿಗೂ ಕೂಡ ಶೇ.20ರಷ್ಟು ಬೋನಸ್ ಅನ್ನು ಸಕಾಲದಲ್ಲಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. 2021-22ನೇ ಸಾಲಿನಲ್ಲಿ ಉಳಿದ ಬಾಕಿ ಬೋನಸ್ ಅನ್ನು ಲೆಕ್ಕ ಹಾಕಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು
ನೀಡುವುದಾಗಿ ಹಾಗೂ 2022-23ನೇ ಸಾಲಿಗೂ ಕೂಡ ಶೇ.20ರಷ್ಟು ಬೋನಸ್ ಅನ್ನು ಸಕಾಲದಲ್ಲಿ ಮಂಜೂರಾತಿ ಪಡೆದು ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ನೀಡುವುದಾಗಿ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದಾರೆ. ಅಲ್ಲದೆ ಕಾರ್ಮಿಕರಿಗೆ ಆಗಿಂದಾಗ್ಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿರುತ್ತಾರೆ. ವ್ಯವಸ್ಥಾಪಕ ನಿರ್ದೇಶಕರು ಕಾರ್ಮಿಕರ ಮನವಿಗೆ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಚಂದ್ರಲಿಂಗಂ ಹೇಳಿದರು.
ಕಾರ್ಮಿಕರು ನಿವೃತ್ತರಾದ ಬಳಿಕ ಮನೆ ಬಿಡಬೇಕಾಗುತ್ತದೆ. ಇದರಿಂದ ಮನೆ ಇಲ್ಲದೆ ಕಾರ್ಮಿಕರು ಅತಂತ್ರವಾಗುವ ಪರಿಸ್ಥಿತಿ ಇದೆ. ಆದುದರಿಂದ ಮನೆಯನ್ನು ಕಾರ್ಮಿಕರಿಗೆ ಖಾಯಂ ಆಗಿ ನೀಡಬೇಕು. ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೂ ಜಾತಿ ಪ್ರಮಾಣ ಪತ್ರ ಸಿಂಧುವಾಗಬೇಕು ಎಂದು ಅವರು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೊ, ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಶಹೀದ್ ಪಾರೆ, ತೋಟ ತೊಲಿಳಾಲರ್ ಸಂಘದ ಪದಾಧಿಕಾರಿಗಳಾದ ಎಂ.ಎಸ್.ಕುಮಾರ್, ಗಣೇಶ್ ಉಪಸ್ಥಿತರಿದ್ದರು.