ಸುಳ್ಯ:ಜನಪ್ರತಿನಿಧಿಯಾಗಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ.ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿ ಭವಿಷ್ಯತ್ತಿನ ಹಿತ ದೃಷ್ಠಿಯಿಂದ ಯೋಜನೆ ರೂಪಿಸಬೇಕಾಗಿದೆ. ಆ ರೀತಿಯ ಯೋಚನೆಗಳಿಂದ ಕಾರ್ಯಕ್ರಮ ರೂಪಿಸಿದ ಕಾರಣ ಸುಳ್ಯ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಉತ್ತಮ ಅಭಿವೃದ್ಧಿ ಆಗಿದೆ. ಸುಳ್ಯ ತಾಲೂಕಿನ ಆರೋಗ್ಯ ಕ್ಷೇತ್ರದ ಮೇಲೆ
ಜನರಿಗೆ ವಿಶ್ವಾಸ ಬರುವಂತಾಗಿದೆ ಎಂದು ಮಾಜಿ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ.ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ
ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಲಕರಣೆ ವಿತರಣೆ, ಗ್ರಾಮೀಣ ಸೇವೆ ಸಲ್ಲಿಸಿದ ವೈದ್ಯರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಳ್ಯದ ಆಸ್ಪತ್ರೆಗೆ ಆಮ್ಲಜನಕ ಘಟಕ ಸ್ಥಾಪನೆ, ಸುಮಾರು 5 ಕೋಟಿಗೂ ಮಿಕ್ಕಿ ಯಂತ್ರೋಪಕರಣಗಳನ್ನು ಒದಗಿಸಿ ಕೊಡಲಾಗಿದೆ ಎಂದರು.

ಪ್ರಮಾಣಿಕ ಎಂಬ ಶಬ್ದಕ್ಕೆ ಅರ್ಥ ಇದೆಯೇ..?
ಈಗಿನ ಕಾಲಕ್ಕೆ ಪ್ರಾಮಾಣಿಕ ಎಂಬ ಶಬ್ದಕ್ಕೆ ಈಗ ಅರ್ಥ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಾಮಾಣಿಕವಾಗಿ ನಡೆದುಕೊಂಡರೆ ಮಾತ್ರ ಭವಿಷ್ಯ ಇದೆ ಎಂಬುದು ಸತ್ಯ. ಆದುದರಿಂದ ಪ್ರಾಮಾಣಿಕವಾದ ಸೇವೆಯನ್ನು ನೀಡಿ ಎಂದು ಅಂಗಾರ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ
ಸರಕಾರದ, ಜನಪ್ರತಿನಿಧಿಗಳ ಯೋಚನೆ, ಯೋಜನೆ ಉತ್ತಮವಾಗಿದ್ದರೆ ಜನರಿಗೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ. ಉತ್ತಮ ಸೇವೆಯ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕು. ವೈದ್ಯರ, ಆರೋಗ್ಯ ಕಾರ್ಯಕರ್ತರ ಸೇವೆ ದೇವರಿಗೆ ಸಮಾನ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮೀಣ ಸೇವೆಯಡಿ ಕಾರ್ಯನಿರ್ವಹಿಸಿದ ಡಾ.ನಿವೇದಿತ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ರೇವತಿ ವಂದಿಸಿದರು.ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಮಹೇಶ್ ಕುಮಾರ್ ಮೇನಾಲ ಮತ್ತಿತರರು ಭಾಗವಹಿಸಿದ್ದರು.









