ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸನಿಹದ ಏನೇಕಲ್’ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟಲ್ ಮತ್ತು ರೆಸಾರ್ಟ್ ಉದ್ಘಾಟನೆಗೆ ಸಜ್ಜುಗೊಂಡಿದೆ.ಏಪ್ರಿಲ್ 3 ಬುಧವಾರ ಬೆಳಗ್ಗೆ 10.30ಕ್ಕೆ ರಾಜ್ಯ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ
ಎಂದು ದಿ.ರಾಯಲ್ ಎಂಟರ್ಪ್ರೈಸಸ್ನ ಚೆಯರ್ಮೆನ್ ಹರ್ಷ ಪುಟ್ಟಪ್ಪ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಭಾಗವಹಿಸುವರು.ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಹಿಸುವರು. ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾನನದೊಳಗಿನ ಸುಂದರ ಅನುಭವ:
ನೆಮ್ಮದಿಯನ್ನು ಅರಸುವ ಪ್ರವಾಸಿಗರ ಹೊಸ ಡೆಸ್ಟಿನೇಷನ್ ‘ದಿ ರಾಯಲ್ ಮೊಂಟಾನಾ’ ಹೋಟೆಲ್ & ರೆಸಾರ್ಟ್ ಇದೀಗ ಕುಕ್ಕೆ ಸುಬ್ರಹ್ಮಣ್ಯದ ಸನಿಹದಲ್ಲಿ ಪ್ರಾರಂಭವಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ ಯಾತ್ರಾ ತಾಣದಂತೆ, ಪ್ರವಾಸಿ ತಾಣವೂ ಹೌದು. ಹೀಗೆ ಬರುವ ಪ್ರವಾಸಿಗರಿಗೆ ಅಲ್ಲಿಂದ ಕೇವಲ ಆರು ಕಿ.ಮೀ. ದೂರದ ಏನೆಕಲ್ಲು ಗ್ರಾಮದಲ್ಲಿ ಸುಂದರ ರೆಸಾರ್ಟ್ ಕೈಬೀಸಿ ಕರೆಯುತ್ತಿದೆ. ಅದುವೇ ಡಿ ರಾಯಲ್ ಮೊಂಟಾನಾ’.ಸುಬ್ರಹ್ಮಣ್ಯ– ಪುತ್ತೂರು ರಸ್ತೆಯಲ್ಲಿ ಏನೆಕಲ್ಲು ಎಂಬ ಕಾನನದೊಳಗೆ ಹುದುಗಿದ ಊರು ಸಿಗುತ್ತದೆ. ಅದರ ಸಮೀಪದಲ್ಲೇ ಇದೆ ಬೂದಿಪಳ್ಳ ಎಂಬ ಹಸಿರು ಹೊದಿಕೆ ಹೊದ್ದ ಸುಂದರ ಪ್ರದೇಶ. ಅಲ್ಲಿಯೇ ಹೊಸದಾಗಿ ಆರಂಭಗೊಂಡಿದೆ ದಿ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್. ಕುಮಾರಧಾರಾ ಸ್ನಾನಘಟ್ಟದಿಂದ ಇಲ್ಲಿಗೆ ಇರುವ ದೂರ ಕೇವಲ 5 ಕಿ.ಮೀ. ಮಾತ್ರ.ಮೂರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡಿರುವ

ಹಾಗೂ ಪ್ರಕೃತಿ ತನ್ನ ಸೌಂದರ್ಯವೆಲ್ಲವನ್ನೂ ಇಲ್ಲೇ ಅನಾವರಣಗೊಳಿಸುವ ರೀತಿಯ ಲ್ಯಾಂಡ್ಸ್ಕೇಪ್ ಪರಿಕಲ್ಪನೆಯಲ್ಲಿ ಈ ಹೋಟೆಲ್ & ರೆಸಾರ್ಟ್ ನಿರ್ಮಾಣವಾಗಿದೆ ಎಂದು ಅವರು ವಿವರಿಸಿದರು. ಯಾತ್ರಿಕರ ಜತೆಗೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯದ ಊಟ, ವಸತಿ, ಮನರಂಜನೆ, ಮಕ್ಕಳಿಗೆ ಆಟವಾಡುವ ಸ್ಥಳ, ಈಜುಕೊಳ ಸಹಿತ ಎಲ್ಲಾ ಸೌಲಭ್ಯಗಳೂ ಒಂದೇ ಕಡೆ ಸಿಗಬೇಕು ಎಂಬ ಪರಿಕಲ್ಪನೆಯೊಂದಿಗೆ ಅತ್ಯುತ್ತಮವಾಗಿ ತಲೆ ಎತ್ತಿ ನಿಂತಿದೆ ಏನೆಕಲ್ಲಿನ ಈ ಹೊಸ ಪ್ರವಾಸಿ ನೆಲೆ. ಆಧುನಿಕ ರೆಸಾರ್ಟ್ಗಳಲ್ಲಿ ಇರುವಂತಹ ಲಾನ್ ಏರಿಯಾ, ಪ್ಯಾಂಟ್ರಿ ಹೌಸ್, ಬ್ಯಾಂಕ್ವೆಟ್ ಹಾಲ್, ಎಸಿ ಡೈನಿಂಗ್ ಹಾಲ್ ಸಹಿತ ಊಟ, ಉಪಾಹಾರ, ಪಾನೀಯ ಸೇವನೆ, ವಿಶ್ರಾಂತಿ, ವಾಕಿಂಗ್, ಸ್ವಿಮ್ಮಿಂಗ್..ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಒಂದು ಬಾರಿ ಬಂದರೆ ಹೊರ ಪ್ರಪಂಚದ ಜಂಜಾಟಗಳನ್ನು ಮರೆತುಬಿಟ್ಟು ಹಾಯಾಗಿ ಒಂದೆರಡು ದಿನ ಇಲ್ಲೇ ಕಾಲ ಕಳೆಯುವ ಮನಸ್ಸು ಮಾಡುವುದು ನಿಶ್ಚಿತ.

ರೆಸಾರ್ಟ್ನಲ್ಲಿ ಒಟ್ಟು 29 ಕೊಠಡಿಗಳಿವೆ. ಎಸಿ ಮತ್ತು ನಾನ್ ಎಸಿ ಕೊಠಡಿಗಳಿದ್ದು, ಎಲ್ಲವೂ ವಿಶಾಲವಾಗಿವೆ, ಶುಚಿಯಾಗಿವೆ. 4 ಕಾಟೇಜ್ಗಳಿದ್ದು, ಮಡಿಕೇರಿಯ ಅನುಭವವನ್ನು ಈ ಕಾಟೇಜ್ಗಳು ಕುಕ್ಕೆಯ ಪರಿಸರದಲ್ಲಿ ನೀಡುವುದು ನಿಶ್ಚಿತ. ಬಿರು ಬೀಸಿಗೆಯಲ್ಲೂ ಕಾಡೊಳಗಿಂದ ಹರಿದು ಬರುವ ಜಲಜಲಲ ಜಲಧಾರೆ ಇಲ್ಲಿನ ಜೀವಜಲ. ಜತೆಗೆ ಕೊಳವೆಬಾವಿಯಲ್ಲೂ ನೀರು ಲಭ್ಯ ಇದೆ. 100ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಇಲ್ಲಿ ಅವಕಾಶ ಇದೆ. ಮದುವೆ, ಅತಿಥಿ ಸತ್ಕಾರ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಹಿತ ಸ್ನೇಹಿತರು, ಬಂಧುಬಳಗ ಸೇರಿಕೊಂಡು ಸಮಯ ಕಳೆಯಲು ಇಲ್ಲಿ ಸಾಕಷ್ಟು ಅವಕಾಶ ಇದೆ. ಮದುವೆಯಲ್ಲಿ ಒಂದು ಸಾವಿರ ಮಂದಿಯನ್ನು ನಿಭಾಯಿಸಬಹುದಾದಷ್ಟು ಸ್ಥಳಾವಕಾಶ ಇದ್ದು, ಅದಕ್ಕಾಗಿ ಸುಂದರ ಲಾನ್ ನಿರ್ಮಾಣವಾಗಿದೆ. ಸಣ್ಣ ಪಾರ್ಟಿಗಳಿಗೆ ಸುಮಾರು 400 ಜನರಿಗೆ ಅವಕಾಶ ಇರುವ ಪಾರ್ಟಿ ಹಾಲ್ ಸಹ ಇದೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಿಯರು ಇಷ್ಟಪಡುವ ನಾನಾ ಬಗೆಯ ಕರಾವಳಿ ಮತ್ತು ಇತರ ಎಲ್ಲಾ ಬಗೆಯ ಅಡುಗೆಯನ್ನೂ ಸಿದ್ಧಪಡಿಸಿ ಬಡಿಸುವ ಎರಡು ಪ್ರತ್ಯೇಕ ಹೋಟೆಲ್ಗಳು ಇಲ್ಲಿವೆ. ಸಸ್ಯಾಹಾರಿ ಹೋಟೆಲ್ಗೆ ‘ಪುಳಿಚಾರ್ ವೆಜ್ ರೆಸ್ಟೋರೆಂಟ್’ ಎಂಬ ಹೆಸರು ಇಡಲಾಗಿದ್ದರೆ, ನಾನ್ವೆಜ್ ಹೋಟೆಲ್ಗೆ ‘ಪ್ಯಾರಡೈಸ್ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬ ಹೆಸರು ಇಡಲಾಗಿದೆ. ಎರಡಕ್ಕೂ ಪ್ರತ್ಯೇಕ ಕಿಚನ್ಗಳು ಇರುವುದು ವಿಶೇಷ. ಹೀಗಾಗಿ ಶುದ್ಧ ಸಸ್ಯಾಹಾರಿಗಳು ಸಹ ಇಲ್ಲಿ ಮನಸೋ ಇಚ್ಛೆ ಊಟ ಮಾಡಬಹುದು.
ಯಾತ್ರೆ ಮತ್ತು ಪ್ರವಾಸೋದ್ಯಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಯಾತ್ರೆಗೆ ಹೋಗುವವರೆಲ್ಲರೂ ಪ್ರವಾಸಿಗರೇ, ಪ್ರವಾಸಿಗರು ಎಲ್ಲರೂ ಯಾತ್ರಿಕರಲ್ಲ. ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ ಹೀಗೆ ಈ ಭಾಗದ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಆಸ್ವಾದಿಸಲು ಬರುವವರಿಗೆ ಈ ಭಾಗದಲ್ಲಿ ನಾಲ್ಕಾರು ದಿನಗಳನ್ನು ನೆಮ್ಮದಿಯಾಗಿ ಕಳೆಯಲು ದಿ ರಾಯಲ್ ಮೊಂಟಾನಾ ರೆಸಾರ್ಟ್ ಅತ್ಯುತ್ತಮ ತಾಣ ಎಂದು ಹರ್ಷ ಪುಟ್ಟಪ್ಪ ವಿವರಿಸಿದರು. ಕುಕ್ಕೆ ಸುಬ್ರಹ್ಮಣ್ಯ ನೋಡಲು ಬರುವವರಿಗೆ ಈ ಭಾಗದಲ್ಲಿ ಒಂದೆರಡು ದಿನವನ್ನು ಆರಾಮವಾಗಿ ಕಳೆಯಲು ಅವಕಾಶ ಇರಬೇಕು. ಜತೆಗೆ ಹೊಸದಾಗಿ ಪ್ರವಾಸಕ್ಕೆ ಬರುವವರಿಗೆ ಉತ್ತಮ ಊಟ, ಉಪಚಾರದ ವ್ಯವಸ್ಥೆ ಕಲ್ಪಿಸಬೇಕು ಎಂಬ ಕಾಳಜಿಯಿಂದ ಡಿ ರಾಯಲ್ ಮೊಂಟಾನಾ ಸ್ಥಾಪಿಸಿದ್ದೇವೆ. ಈ ಭಾಗದಲ್ಲಿ ಸಹ ಅದೆಷ್ಟೋ ಬೆಳಕಿಗೆ ಬಾರದ ಪ್ರಾಚೀನ ಸ್ಥಳಗಳಿವೆ. ಕಾಡಿನ ಸಂಪತ್ತು ಇದೆ. ಜಾನಪದ ಸೊಗಡು ಇದೆ. ಅವುಗಳನ್ನು ಪ್ರವಾಸಿಗರಿಗೆ ಪರಿಚಯ ಮಾಡಿಸುವ ಉದ್ದೇಶ ಈ ರೆಸಾರ್ಟ್ ಸ್ಥಾಪನೆಯಿಂದ ಈಡೇರಬಹುದು ಎಂಬ ನಿರೀಕ್ಷೆ ನಮ್ಮದು ಎಂದು ಅವರು ವಿವರಿಸಿದರು.

ದಿ.ರಾಯಲ್ ಮೊಂಟಾನಾ ಹೋಟೆಲ್ ಮತ್ತು ರಿಸಾರ್ಟ್ನ ನಿರ್ದೇಶಕಿ ಧನುಶ್ರೀ ಮಾತನಾಡಿ ಯುವ ಮನಸ್ಸುಗಳು ಬೇರೆ ಏನನ್ನೋ ಬಯಸುತ್ತಿರುತ್ತವೆ. ನಮ್ಮ ಮದುವೆ ಇಂತಲ್ಲೇ ಆಗಬೇಕು. ಸುತ್ತಮುತ್ತಲಿನ ಪರಿಸರ, ಲ್ಯಾಂಡ್ಸ್ಕೇಪ್ ಹೀಗೆಯೇ ಇರಬೇಕು ಎಂದು ಆಲೋಚಿಸುತ್ತಾರೆ. ಅವರ ಇಷ್ಟಕ್ಕೆ ತಕ್ಕಂತೆ ಇಲ್ಲಿ ಮದುವೆ ಮಾಡಿಕೊಳ್ಳುವ ಸ್ಥಳ ನಿರ್ಮಾಣವಾಗಿದೆ. ಟ್ರೆಕ್ಕಿಂಗ್ ಹೋಗುವವರಿಗೆ ಇಲ್ಲಿ ಸಾಕಷ್ಟು ಅವಕಾಶ ಇದೆ. ಕುಮಾರ ಪರ್ವತದ ಜತೆಗೆ ಸುತ್ತಮುತ್ತಲಿನ ಕಾಡುಗಳಲ್ಲಿ ಸುತ್ತಾಡುವ ವಿಶಿಷ್ಟ ಅನುಭವ, ಪ್ರವಾಸಿಗರಿಗೆ ಉತ್ತಮ ಡೆಸ್ಟಿನೇಷನ್ ಆಗುವ ವಿಶ್ವಾಸ ಇದೆ ಎಂದು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲಿ ನಕಾಶೆ:
ಹರ್ಷ ಪುಟ್ಟಪ್ಪ ನೇತೃತ್ವದ ದಿ ರಾಯಲ್ ಎಂಟರ್’ಪ್ರೈಸಸ್ ಸಮೂಹ ಸಂಸ್ಥೆಯ ಗುರಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದು. ಅದಕ್ಕಾಗಿ ಈ ಸಂಸ್ಥೆ ಯೇನೆಕಲ್ಲಿನ ದಿ ರಾಯಲ್ ಮೊಂಟಾನಾ ರೆಸಾರ್ಟ್ ಜತೆಗೆ ಕಾರವಾರದಿಂದ ಕೂರ್ಗ್’ವರೆಗೆ ಕುಂದಾಪುರದಿಂದ ಕುಕ್ಕೆವರೆಗೆ ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಭಾಗದಲ್ಲಿನ ಬೆಳಕಿಗೆ ಬಾರದ ಅದ್ಭುತ ಪ್ರವಾಸಿ ತಾಣಗಳನ್ನು ಜಗತ್ತಿಗೆ ತೆರೆದಿಡುವುದೇ ಸಂಸ್ಥೆಯ ಉದ್ದೇಶ.ಅದಕ್ಕಾಗಿ ಈಗಾಗಲೇ ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿ 10 ಎಕರೆ ವಿಶಾಲವಾದ ದ್ವೀಪವನ್ನು ಅಭಿವೃದ್ಧಿಪಡಿಸುವುದು, ಅಲ್ಲೊಂದು ಭವ್ಯ ರೆಸಾರ್ಟ್ ನಿರ್ಮಿಸುವ ಯೋಜನೆ ಇದೆ. ಕೇರಳದ ಕುಮರಕಂ ರೀತಿಯಲ್ಲಿ

ಇದು ಅಭಿವೃದ್ಧಿ ಹೊಂದಲಿದೆ. ಅಲ್ಲಿಗೆ ಸಮೀಪದಲ್ಲೇ ಡೆಲ್ಟಾ ಬೀಚ್ ಇದ್ದು, ಅದು ದ್ವೀಪ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲಸ ಮಾಡಲಿದೆ.
ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ ಬೀಚ್ ರೆಸಾರ್ಟ್ ಶೀಘ್ರದಲ್ಲಿ ಸ್ಥಾಪನೆಯಾಗಲಿದ್ದು, ಕಾರ್ಕಳ ತಾಲೂಕಿನ ನಾರಾವಿಯ ಪಶ್ಚಿಮ ಘಟ್ಟದ ಸೆರಗಿನಲ್ಲಿ ಸಹ ಒಂದು ಸುಂದರ ರೆಸಾರ್ಟ್ ನಿರ್ಮಾಣವಾಗಲಿದೆ. ಕಾರ್ಕಳದ ದುರ್ಗದ ಸಮೀಪದಲ್ಲಿ ಮತ್ತೊಂದು ಸುಂದರ ರೆಸಾರ್ಟ್ ತಲೆ ಎತ್ತಲಿದೆ. ಉಜಿರೆ ಸಮೀಪದ ದಿಡುಪೆಯ ಸುಂದರ ತಾಣವನ್ನು ಸಹ ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ನಡೆಯಲಿದೆ.ಶೃಂಗೇರಿ ಸಮೀಪದ ಕೊಪ್ಪದ ಬಳಿ ರೆಸಾರ್ಟ್ ಸ್ಥಾಪನೆಯಾಗಲಿದ್ದು, ಸಕಲೇಶಪುರದ ರೆಸಾರ್ಟ್ ಕೆಲಸ ಮುಂದುವರಿದಿದೆ. ಮಡಿಕೇರಿಯ ಕೋಟೆಬೆಟ್ಟದಲ್ಲಿ ಈಗಾಗಲೇ ನೀಲನಕಾಶೆಯನ್ನು ರೂಪಿಸಿದ್ದು, ಕೇರಳದ ವಯನಾಡ್ನಲ್ಲಿ ಸಹ ಹೋಟೆಲ್ ಮತ್ತು ರೆಸಾರ್ಟ್ ನಿರ್ಮಾಣದ ಕೆಲಸ ಆರಂಭಗೊಂಡಿದೆ. ಸಂಸ್ಥೆಯ ಹೊಸ ಹೊಸ ಯೋಜನೆಗಳೆಲ್ಲವೂ ಹೊರಜಗತ್ತಿಗೆ ಇದುವರೆಗೆ ತೆರೆದುಕೊಂಡಿರದ ಸ್ಥಳಗಳನ್ನು ಪರಿಚಯಿಸುವುದಾಗಿದೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಆಯಾಮ ಸಿಗಲಿದೆ. ಒಂದೆಡೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರಾದ ಕರಾವಳಿ, ಮಲೆನಾಡು, ಇದೀಗ ತನ್ನ ಪ್ರಕೃತಿ ಸೌಂದರ್ಯದ ಮೂಲಕವೂ ಪ್ರವಾಸಿಗರನ್ನು ದೊಡ್ಡ

ಮಟ್ಟದಲ್ಲಿ ಸೆಳೆಯುವ ವಿಶ್ವಾಸ ಇಟ್ಟುಕೊಳ್ಳಲಾಗಿದೆ. ಕೇರಳ ಹೇಗೆ ತನ್ನ ಪ್ರಕೃತಿ ಸೌಂದರ್ಯವನ್ನು ಪ್ರವಾಸೋದ್ಯಮದ ನೆಲೆಯನ್ನಾಗಿ ಮಾಡಿತೋ, ಅದೇ ರೀತಿಯ ಚಿತ್ರಣ ನಮ್ಮ ಕರಾವಳಿ ತೀರದಲ್ಲೂ ಸಿಗುವಂತಾಗಲಿದೆ. ಜಗತ್ತೇ ನಿಬ್ಬೆರಗಾಗಿಸುವ ಪ್ರಕೃತಿ ಸೌಂದರ್ಯದ ಖನಿ ಕರಾವಳಿ, ಮಲೆನಾಡು, ಉತ್ತರ ಕನ್ನಡ, ಕೊಡಗು ಹಾಗೂ ಸಕಲೇಶಪುರ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆಯನ್ನು ನೀಡುವುದೇ ನಮ್ಮ ಪ್ರಮುಖ ಉದ್ದೇಶ ಎನ್ನುವುದು ಈ ಯೋಜನೆಯ ಉದ್ದೇಶ ಎಂದು ಹರ್ಷ ಪುಟ್ಟಪ್ಪ ವಿವರಿಸಿದರು.
ಬೆಂಗಳೂರಿನ ವೇರ್ ಹೌಸಿಂಗ್ ಕ್ಷೇತ್ರದಲ್ಲಿ ಅಪಾರ ಪರಿಣತಿಯನ್ನು ಹೊಂದಿ, ಹೋಟೆಲ್ ಉದ್ಯಮವನ್ನು ನಿರ್ವಹಿಸುತ್ತಿರುವ ಇವರು ನೂರಾರು ಜನರಿಗೆ ಉದ್ಯೋಗವನ್ನು ನೀಡಿರುತ್ತಾರೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಮುನ್ನುಡಿ ಬರೆದಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಹೋಟೆಲ್ ಮತ್ತು ರೆಸಾರ್ಟನ್ನು ಆರಂಭಿಸುವ ಮೂಲಕ ರಾಯಲ್ ಎಂಟರ್’ಪ್ರೈಸಸ್ ಹೊಸ ಮುನ್ನುಡಿ ಬರೆದಿದೆ.
ಪತ್ರಿಕಾಗೋಷ್ಠಿಯಲ್ಲಿ ದಿ ರಾಯಲ್ ಎಂಟರ್’ಪ್ರೈಸಸ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಧನುಶ್ರೀ, ಗಗನ್ ಹರ್ಷ ಉಪಸ್ಥಿತರಿದ್ದರು. ವ್ಯವಸ್ಥಾಪಕ ರೂಬೆಲ್, ರವಿಶಂಕರ ಬೆಟ್ಟಂಪಾಡಿ ಮತ್ತಿತರರು ಉಪಸ್ಥಿತರಿದ್ದರು.









