ಸುಳ್ಯ: ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಡಿ. 9 ಮತ್ತು 10 ರಂದು ಕಲ್ಮಡ್ಕದ ರಾಮನಗರದ ಶ್ರೀರಾಮ ಭಜನಾ ಮಂದಿರದ
ಪಂಚವಟಿ ಸಭಾಭವನದಲ್ಲಿ ವಿಪ್ರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ತಿಳಿಸಿದ್ಸಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಾಹ್ಮಣ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸಿ ಆತ್ಮ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ, ಎಲ್ಲರನ್ನೂ ಒಂದು ಕಡೆಯಲ್ಲಿ ಒಟ್ಟು ಸೇರಿಸಿ ಜತೆಯಾಗಿ ಸಂಭ್ರಮಿಸುವ ಸಲುವಾಗಿ ವಿಪ್ರ ಸಮಾವೇಶ
ನಡೆಸಲಾಗುತ್ತಿದೆ. ಸಮಾಜ ಬಾಂಧವರಿಗೆ ಸಮಾವೇಶದ ಮೂಲಕ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು ಎಂದರು.
ಸಮಾವೇಶದಲ್ಲಿ ಸಮಾಜದ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು.
ಡಿ. 9 ರಂದು ಸಮಾವೇಶವನ್ನು ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ.ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಮಹೇಶ್ ಕಜೆ, ಸುಳ್ಯದ ವಿವಿಧ ಬ್ರಾಹ್ಮಣ ಸಂಘಟನೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.ಡಿ.10ರಂದು ಅಪರಾಹ್ನ 2.30ರಿಂದ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಭಟ್ ಕೊಡಂಕೇರಿ ಅಧ್ಯಕ್ಷತೆಯಲ್ಲಿ ಸಮಾವೇಷೋದ್ಘೋಷ ನಡೆಯಲಿದೆ. ಅಖಿಲ ಕರ್ನಾಟಕ
ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಪ್ರಧಾನ ಭಾಷಣ ಮಾಡಲಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಕಾರ್ಯಕಾರಿ ಸಮಿತಿ ಸದಸ್ಯ ಹರಿಪ್ರಸಾದ್ ಪೆರಿಯಪ್ಪು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್.ಪ್ರಸಾದ್, ಸತ್ಯನಾರಾಯಣ ಮೊಗ್ರ, ಕೆ.ಎನ್.ಪರಮೇಶ್ವರಯ್ಯ ಕಲ್ಮಡ್ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಂಗಳೂರು ಕೋಟೆಕಾರು ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸಂಘದ ಉಪಾಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಮಾತನಾಡಿ
ಸಮಾವೇಶದಲ್ಲಿ ಡಿ.9 ಮತ್ತು 10ರಂದು ವಿವಿಧ
ವೈದಿಕ ಕಾರ್ಯಕ್ರಮ, ವೇದ ಪಠಣ, ಭಜನೆ, ದೇವರನಾಮ ಹಾಗೂ ವಿಚಾರಗೋಷ್ಠಿಗಳು ನಡೆಯಲಿದೆ. ಡಿ.9 ರಂದು’ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರ ವಲಸೆ ಕುರಿತು ಡಾ. ಎಂ.ಪ್ರಭಾಕರ ಜೋಷಿಯವರು ಮಾತನಾಡುವರು.
ವೇ. ಮೂ. ಕರುವಜೆ ಕೇಶವ ಜೋಯಿಸ ಅವರು ವೇದ ಉವಾಚ,
ದೀಪಾ ಪಡ್ಕೆ ಅವರು ‘ಸಾಹಿತ್ಯದಲ್ಲಿ ಸುಳ್ಯ ಬ್ರಾಹ್ಮಣರ ಕೊಡುಗೆ, ಸಾಯಿ ನಾರಾಯಣ ಕಲ್ಮಡ್ಕ ಅವರು ಶಾಸ್ತ್ರೀಯ ಸಂಗೀತ, ಡಾ. ಕಿಶನ್ ರಾವ್ ಬಾಳಿಲ ‘ವೈದ್ಯೋ ನಾರಾಯಣೋ ಹರಿ’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. ಡಿ.10ರಂದು ನಡೆಯುವ ವಿಚಾರಗೋಷ್ಠಿಯಲ್ಲಿ
ಡಾ.ವೀಣಾ ಫಾಲಚಂದ್ರ ಅವರು ಬ್ರಾಹ್ಮಣರಲ್ಲಿ ಆಚರಣೆ, ಪ್ರಕಾಶ ಮೂಡಿತ್ತಾಯ ಅವರು ಶಿಕ್ಷಕನಾಗಿ ಬ್ರಾಹ್ಮಣ,
ಗೀತಾ ಸರಳಾಯ ಅವರು ಶಾಸ್ತ್ರೀಯ ನೃತ್ಯ ವಿಷಯಗಳ ಬಗ್ಗೆ ಮಾತನಾಡುವರು.ಸಮನ್ವಯ ಗೋಷ್ಠಿಯಲ್ಲಿ ಸಮಾಜದಲ್ಲಿ ಯುವ ಬ್ರಾಹ್ಮಣರು ಎಂಬ ವಿಷಯಗಳ ಕುರಿತು ಕೃಷ್ಣ ರಾವ್, ವಿ.ಪಿ ಹೊಳ್ಳ, ಸುಧಾಕರ ನೆಟ್ಟಾರು ಇವರು ಮಾತನಾಡುವರು. ಸುಬ್ರಾಯ ವಿ ಅಧ್ಯಕ್ಷತೆ ವಹಿಸುವರು.ಸಮಾವೇಶದಲ್ಲಿ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾದ್ಯ ಸಂಗೀತ ಗೋಷ್ಠಿ, ನೃತ್ಯಾರ್ಪಣಂ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟವು ನಡೆಯಲಿದೆ. ತಾಲೂಕಿನ ಹಿರಿಯ ವಿಪ್ರ ಸಾಧಕರಿಗೆ ಗೌರವಾರ್ಪಣೆಯು ನಡೆಯಲಿರುವುದು ಎಂದು ವಿವರಿಸಿದರು.
ಸಂಘದ ಕಾರ್ಯದರ್ಶಿ ಕೃಷ್ಣ ರಾವ್ ನಾವೂರು ಮಾತನಾಡಿ ಬ್ರಾಹ್ಮಣ ಸಂಘ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು. 1943 ರಲ್ಲಿ ಉಬರಡ್ಕ ದಿ. ತಿಮ್ಮಪ್ಪಯ್ಯ ಭಟ್ ಸ್ಥಾಪಕಾಧ್ಯಕ್ಷರಾಗಿ, ಕಾರ್ಯದರ್ಶಿ ದಿ.ಚಣಿಲ ರಾಮಚಂದ್ರ ಭಟ್ ರವರ ಸಾರಥ್ಯದಲ್ಲಿ ತಾಲೂಕು ದ್ರಾವಿಡ ಬ್ರಾಹ್ಮಣ ಸಂಘವನ್ನು ರಚಿಸಲಾಯಿತು.1973 ರಲ್ಲಿ ತಾಲೂಕು ಬ್ರಾಹ್ಮಣ ಸಂಘ ಸ್ಥಾಪಿಸಿ ಪ್ರಥಮ ಸಮ್ಮೇಳನ ನಡೆಸಲಾಯಿತು. 1994 ರಲ್ಲಿ ದ್ವಿತೀಯ ಸಮ್ಮೇಳನ ನಡೆಸಲಾಗಿತ್ತು.
ಇದೀಗ ತೃತೀಯ ವಿಪ್ರ ಸಮಾವೇಶವನ್ನು ಕಲ್ಮಡ್ಕದಲ್ಲಿ ಆಯೋಜಿಸಲಾಗಿದೆ. ಸಂಘದ ವತಿಯಿಂದ ಸ್ವಂತ ಕಟ್ಟಡದಲ್ಲಿ ವಿದ್ಯಾರ್ಥಿ ಭವನ ನಿರ್ಮಿಸಿ ವಿದ್ಯಾರ್ಥಿ ನಿಲಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ವರ್ಷಂಪ್ರತಿ ಸಮಾವೇಶವನ್ನು ತಾಲೂಕಿನ ಬೇರೆ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜತೆ ಕಾರ್ಯದರ್ಶಿಗಳಾದ ಸತೀಶ್ ರಾವ್ ಐ.ಕೆ ದಾಸರಬೈಲು, ಸುಬ್ರಹ್ಮಣ್ಯ ಹೊಳ್ಳ ಎಂ.ಬೈತಡ್ಕ, ಸದಸ್ಯರಾದ ಅರುಣ್ ಕುಮಾರ್ ಎನ್ ಸುಳ್ಯ, ಈಶ್ವರ ಕುಮಾರ್ ಭಟ್ ಉಬರಡ್ಕ ಉಪಸ್ಥಿತರಿದ್ದರು.