ಸುಳ್ಯ:ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾ.ಪಂ. ಆಡಳಿತಾಧಿಕಾರಿ ಡಾ. ಸಂತೋಷ್ ಕುಮಾರ್ ಜಿ. ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಸಿದ್ದರು. ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಮಳೆ ಕಡಿಮೆ ಇರುವ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಅವರು ಸೂಚಿಸಿದರು.ಸಾರ್ವಜನಿಕ ನೀರಿನ ತೊಟ್ಟಿಗಳನ್ನು ಸ್ವಚ್ಛವಾಗಿರಿಸಬೇಕು ಎಂದು
ಸೂಚಿಸಿದ ಆಡಳಿತಾಧಿಕಾರಿ ಅವರು ಹಾಸ್ಟೇಲ್ಗಳಲ್ಲಿ ನೀರಿನ ಸ್ವಚ್ಛತೆ ಕಾಪಾಡಬೇಕು. ಹಾಸ್ಟೇಲ್ಗಳ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಹಾಸ್ಟೇಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಹಾರ ಸರಬರಾಜು, ಆಹಾರ ಸುರಕ್ಷತೆ ಸಂಬಂಧಿಸಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅವರು ಸೂಚಿಸಿದರು.ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿ ಚರ್ಚೆ ನಡೆದು ನಾಯಗಳ ಸಂರಕ್ಷಣಾ ಶೆಡ್ ನಿರ್ಮಾಣ ಮತ್ತಿತರ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸಲಾಯಿತು. ಸುಳ್ಯ ನಗರ ಪಂಚಾಯತ್ನ

ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಮೀನು ಕಾಯ್ದಿರಿಸುವ ಸಂಬಂಧಿಸಿ ಚರ್ಚೆ ನಡೆಯಿತು. ಜಮೀನಿಗೆ ಸಂಬಂಧಪಟ್ಟು ಆಕ್ಷೇಪಣೆ ಉಂಟಾಗಿರುವ ಕುರಿತು ಚರ್ಚೆ ನಡೆದು ಜಮೀನು ಸಂಬಂಧಿಸಿ ಸಂಪೂರ್ಣ ದಾಖಲೆ ಸಲ್ಲಿಸುವಂತೆ ಆಡಳಿತಾಧಿಕಾರಿಗಳು ಸೂಚಿಸಿದರು.
ಮಕ್ಕಳ ಅಪೌಷ್ಟಿಕತೆಯ ಬಗ್ಗೆ ಮನೆ ಮನೆ ಭೇಟಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ, ಮಹಿಳಾ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈರು ಹಾಜರಾಗದಂತೆ ಎಚ್ಚರಿಕೆ ವಹಿಸಬೇಕು. ತಾಲೂಕಿಗೆ ಉತ್ತಮ ಫಲಿತಾಂಶ ಬರುವಂತೆ ಪ್ರಯತ್ನ ನಡೆಸಬೇಕು ಎಂದು ಅವರು ಸೂಚಿಸಿದರು. ಸುಳ್ಯ ತಾಲೂಕಿನ ಸೋಣಂಗೇರಿ ಅಂಗನವಾಡಿ ಕಟ್ಟಡ ಕಾಮಗಾರಿ ಎರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ಕರಿಯಮೂಲೆ ಮತ್ತು ಇರುವಂಬಳ್ಳ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ಆಗಿದ್ದರೂ ಕಾಮಗಾರಿ ನಡೆಸಲು ಎನ್ಆರ್ಇಜಿಯಲ್ಲಿ ಮರು ಕ್ರಿಯಾ ಯೋಜನೆ ರೂಪಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.










