ಸುಳ್ಯ:ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ತಾ.ಪಂ. ಆಡಳಿತಾಧಿಕಾರಿ ಡಾ.ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸುಳ್ಯ ನಗರ ಪಂಚಾಯತ್ನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಕಾಯ್ದಿರಿಸಿರುವ ಬಗ್ಗೆ ಚರ್ಚೆ ನಡೆಯಿತು. ಜಾಗ ಕಾಯ್ದಿರಿಸುವ ಕುರಿತು
ಸಹಾಯಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಮಂಜುಳ ಸಭೆಗೆ ತಿಳಿಸಿದರು. ಸ್ಥಳದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಶೀಲನೆ ನಡೆಸಿ ಕ್ಲಿಯರೆನ್ಸ್ ಪಡೆಯುವಂತೆ ಆಡಳಿತಾಧಿಕಾರಿಗಳು ಸೂಚಿಸಿದರು.
ಸುಳ್ಯ ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡಗಳ ಬಗ್ಗೆ ಚರ್ಚೆ ನಡೆಯಿತು. 3 ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಒಂದು ಕಟ್ಟಡ ಸ್ಲಾಬ್ ಹಂತದಲ್ಲಿದೆ, ಎರಡು ಕಟ್ಟಡದ ಕಾಮಗಾರಿಯ ಟೆಂಡರ್ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದರು. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ವಿಳಂಬ ಆಗಿರುವುದಕ್ಕೆ ಆಡಳಿತಾಧಿಕಾರಿ ಇಂಜಿನಿಯರ್ಗಳನ್ನು ಪ್ರಶ್ನಿಸಿದರು. ತಾಲೂಕಿನಲ್ಲಿ 8 ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿದ್ದು ಇದನ್ನು ಕೆಡವುದರ ಬಗ್ಗೆ

ನಿರ್ಧರಿಸಲು ಲೋಕೋಪಯೋಗಿ ಇಲಾಖೆ ಪರಿಶೀಲಿಸಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಬೇಕಾಗಿದೆ. ಇದು ವಿಳಂಬ ಆಗುತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆ ವಿಮೆ ರೈತರ ಖಾತೆಗೆ ಜಮೆ ಆಗುವುದು ವಿಳಂಬ ಆಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಡಿ.8ರಿಂದ ಬೆಳೆ ವಿಮೆ ರೈತರ ಖಾತೆಗೆ ಜಮೆ ಆಗುತಿದೆ, ಕಡಿಮೆ ಮೊತ್ತ ಬರುತಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ
ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಈ ಕುರಿತು ಪರಿಶೀಲನೆ ನಡೆಸಿ, ವಿಮಾ ಕಂಪೆನಿಯೊಂದಿಗೆ ಚರ್ಚಿಸಿ ಎಲ್ಲರಿಗೂ ವಿಮಾ ಮೊತ್ತ ಕೂಡಲೇ ಪಾವತಿಯಾಗುವುದು ಖಾತ್ರಿಪಡಿಸಲು ಕ್ರಮ ವಹಿಸಿ ಎಂದು ಆಡಳಿತಾಧಿಕಾರಿ ಡಾ.ಸಂತೋಷ್ ಕುಮಾರ್ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸುಳ್ಯ ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯ ಬಗ್ಗೆ ಚರ್ಚೆ ನಡೆಯಿತು. ಮಕ್ಕಳ ಶಿಕ್ಷಣ ಹಾಗೂ ಆಹಾರದ ಬಗ್ಗೆ ಮುತುವರ್ಜಿ ವಹಿಸಲು,ಹಾಸ್ಟೆಲ್ಗಳಿಗೆ ಭೇಟಿ ನೀಡಿ ಗುಣಮಟ್ಟದ ಆಹಾರ ನೀಡುವ ಬಗ್ಗೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಿದರು. ಆಹಾರ ಸುರಕ್ಷತೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಯಿತು. ಹಾಸ್ಟೇಲ್ನಲ್ಲಿ ಕಲಿಯುತ್ತಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸೂಕ್ತ ಪರೀಕ್ಷಾ ಪೂರ್ವ ತಯಾರಿ ನಡೆಸಲು ಆಡಳಿತಾಧಿಕಾರಿ ಸೂಚಿಸಿದರು.
ವಿವಿಧ ಇಲಾಖೆಗಳ ಯೋಜನೆ ಹಾಗೂ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ತಹಶೀಲ್ದಾರ್ ಮಂಜುಳ.ಎಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.













