ಸುಳ್ಯ:ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಸುಳ್ಯ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ಮಳೆಗೆ ಎಕ್ಕುಟ್ಟಿ ಹೋಗಿರುವ ರಸ್ತೆಯ ಗುಂಡಿಗಳ ಬಗ್ಗೆ ಮತ್ತು ಗುಂಡಿ ಮುಚ್ಚಲು ಸರಕಾರ ಅನುದಾನ ನೀಡುತ್ತಿಲ್ಲ ಎಂದು ಶಾಸಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ರಸ್ತೆಯ ಗುಂಡಿ ಮುಚ್ಚಲು ಆಗ್ರಹಿಸಿ
ಶಾಸಕರ ನೇತೃತ್ವದಲ್ಲಿ ನಡೆಸಲಾಗಿರುವ ಪ್ರತಿಭಟನೆ ಜನರಿಗೆ ಸರಕಾರದ ವಿರುದ್ಧ ತಪ್ಪು ಅಭಿಪ್ರಾಯ ಬರುವಂತೆ ಮಾಡಿದೆ, ಲೋಕೋಪಯೋಗಿ ಇಲಾಖೆ ಗುಂಡಿ ಮುಚ್ಚಬೇಕಾಗಿತ್ತು, ಶಾಸಕರು ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗಿತ್ತು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದರು. ರಸ್ತೆ ಗುಂಡಿಗಳನ್ನು ಮುಚ್ಚಲಿ ಎಂದು ನಾವು ಪ್ರತಿಭಟನೆ ನಡೆಸಿದ್ದೇವೆ, ಸರಕಾರ ಅನುದಾನ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿದೆ ಎಂದು ಶಾಸಕರು ತಿಳಿಸಿದರು. ಈ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಯಿತು.
ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ಪನ್ನೆ ಎಂಬಲ್ಲಿ ಗುಳಿಕಾನ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡುವ ಬಗ್ಗೆ ಚರ್ಚೆ ನಡೆಯಿತು. ಕಲ್ಮಕಾರು ಗ್ರಾಮದ ಪನ್ನೆ ಎಂಬಲ್ಲಿ ಜಾಗ ಕಾಯ್ದಿರಿಸಲಾಗಿದೆ.ಈ ಜಮೀನಿನ ಪಹಣಿಯಲ್ಲಿ ದಾಖಲಾಗಿರುವ ಭಾಗ ಸುರಕ್ಷಿತ ಕಾಡು ಗೋಮಾಳ ನಮೂದನ್ನು ವಜಾಗೊಳಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ನಿರಪೇಕ್ಷಣಾ ಪತ್ರ ಪಡೆಯಲು ಇದಕ್ಕಾಗಿ ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಹಾಗೂ ಸಹಾಯಕ ಅಯುಕ್ತರಿಗೆ ಪತ್ರಗಳನ್ನು ಬರೆಯಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.ಈ ಕುರಿತು ಚರ್ಚೆ ನಡೆದು ಕೂಡಲೇ ಅಭಿಪ್ರಾಯ ತಿಳಿಸುವಂತೆ ಅರಣ್ಯಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ನಿವೇಶನ ನೀಡಲು ವಿಳಂಬ ಆಗುತ್ತಿರುವ ಬಗ್ಗೆ ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ ಅಮಸಾಧಾನ ವ್ಯಕ್ತಪಡಿಸಿ, ಕೂಡಲೇ ನಿವೇಶನ ಒದಗಿಸಲು ಕ್ರಮಕ್ಕೆ ಅವರು ಆಗ್ರಹಿಸಿದರು.ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಅಪೂರ್ಣ ಬಗ್ಗೆ ಚರ್ಚೆ ನಡೆಯಿತು. ಅಂಬೇಡ್ಕರ್ ಭವನದ ಅನುದಾನಕ್ಕೆ ಹಲವು ಬಾರಿ ಸಚಿವರ ಮನವಿ ಸಲ್ಲಿಸಿದೂ ಆನುದಾನ ನೀಡುತ್ತಿಲ್ಲ. ಸಚಿವರು ನಮಗೆ ಅನುದಾನ ನೀಡಬೇಕು, ಇಲ್ಲವೇ ನಾನು ಶಾಸಕರ ಪ್ರದೇಶ ಅಭಿವೃದ್ಧಿ ಆನುದಾನವನ್ನು ಬಳಸಿ ಅಂಬೇಡ್ಕರ್ ಭವನವನ್ನು ಪೂರ್ಣಗೊಳಿಸಬೇಕಾಗಬಹುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಏನೆಕಲ್ಲು ಎಂಬಲ್ಲಿ ಕೃಷಿಕರ ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆ ತೆರವು ಮಾಡಿರುವ ಕುರಿತು, ಕೊಲ್ಲಮೊಗ್ರು ಗ್ರಾ.ಪಂ.ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ವಿಚಾರದ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಅಕ್ರಮ-ಸಕ್ರಮ ಅರ್ಜಿವಿಲೇವಾರಿ ನಿಧಾನಗತಿ, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ, ಜೆಜೆಎಂ ಕಾಮಗಾರಿ, ಕಚೇರಿಗಳಲ್ಲಿನ ಸಿಬ್ಬಂದಿ ಕೊರತೆ, ಕಾಡಾನೆ ಹಾವಳಿ, ಶಾಲಾ ದುರಸ್ತಿ, ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸುಳ್ಯ ತಹಶೀಲ್ದಾರ್ ಮಂಜುಳಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸೇರಿದಂತೆ ಕೆಡಿಪಿ ಸದಸ್ಯರು, ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.





