ಸುಳ್ಯ: ಸುಳ್ಯ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರಿ ಇದೆ. ಅದಕ್ಕೆ ಎಲ್ಲಾ ಅಧಿಕಾರಿಗಳ ಸಹಕಾರ ಬೇಕು. ಅದರಂತೆ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯತೆ ಅಗತ್ಯ. ಜನರ ಕೆಲಸ ಮಾಡಲು ಯಾವುದೇ ಸಬೂಬು ಬೇಡ ಎಂದು ಶಾಸಕಿ ಭಾಗೀರಥಿ ಮುರುಳ್ಯ ಖಡಕ್ ಸೂಚನೆ ನೀಡಿದರು. ಸಿಬ್ಬಂದಿಗಳು, ಅಧಿಕಾರಿಗಳು ಇಲ್ಲದೆ ಹುದ್ದೆ ಖಾಲಿ ಬಿದ್ದಿರುವ ಕಾರಣ ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಸಿಬ್ಬಂದಿ
ಕೊರತೆ ಸಮಸ್ಯೆಯನ್ನು ನೂತನ ಶಾಸಕರ ಮುಂದೆ ತೆರೆದಿಟ್ಟರು. ಇದು ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಹೈಲೈಟ್ಸ್. ತಾಲೂಕಿನ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಹುದ್ದೆ ಖಾಲಿ ಇರುವ ಕಾರಣ ಕೆಲಸಗಳು ಆಗುತ್ತಿಲ್ಲ. ಇರುವ ಅಧಿಕಾರಿಗಳು, ಸಿಬ್ಬಂದಿಗಳು ಕೆಲಸ ಮಾಡಿದಷ್ಟು ಮುಗಿಯುತ್ತಿಲ್ಲಾ ಎಂದರು.
ಪಶುಪಾಲನಾ ಇಲಾಖೆಯಲ್ಲಿ 53 ಹುದ್ದೆಯಲ್ಲಿ ಎಂಟು ಮಂದಿ ಮಾತ್ರ ಇದ್ದಾರೆ, ಶಿಕ್ಷಣ ಇಲಾಖೆಯಲ್ಲಿ 184 ಶಿಕ್ಷಕರ ಕೊರತೆ ಇದೆ, ಬೇಕಾದಷ್ಟು ಅತಿಥಿ ಶಿಕ್ಷಕರು ಇಲ್ಲಾ, ನಗರ ಪಂಚಾಯತ್ನಲ್ಲಿ ಇಂಜಿನಿಯರ್, ಆರೋಗ್ಯಾಧಿಕಾರಿ, ಕಂದಾಯ ಅಧಿಕಾರಿ ಸೇರಿ ಪ್ರಮುಖ ಹುದ್ದೆಗಳೇ ಖಾಲಿ ಇದೆ. ಹೀಗೆ ಶಿಕ್ಷಣ ಇಲಾಖೆ, ಪಶುಪಾಲನಾ ಇಲಾಖೆ, ಕೃಷಿ ಇಲಾಖೆ, ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗ, ನಗರ ಪಂಚಾಯತ್, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹೀಗೆ ಎಲ್ಲಾ ಇಲಾಖೆಗಳಲ್ಲಿಯೂ ಅಧಿಕಾರಿ, ಸಿಬ್ಬಂದಿಗಳ ಹುದ್ದೆ ಖಾಲಿ ಬಿದ್ದಿದೆ ಎಂದು ಬಹುತೇಕ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಸಮಸ್ಯೆಯನ್ನು ತೋಡಿಕೊಂಡರು. ಹಲವರು ಪ್ರಭಾರದಲ್ಲಿಯೇ ಇದ್ದಾರೆ ಎಂದರು.
ಇಲಾಖೆಗಳ ಮಧ್ಯೆ ಸಮನ್ವಯತೆ ಅಗತ್ಯ-ಶಾಸಕರ ಖಡಕ್ ಸೂಚನೆ:
ಸಂಪೂರ್ಣ ಅಭಿವೃದ್ಧಿ ಹೊಂದಿದ ಮಾದರಿ ಕ್ಷೇತ್ರವಾಗಿ ರೂಪಿಸುವ ಕನಸು ಇದೆ. ಅದರ ಸಾಕ್ಷಾತ್ಕಾರಕ್ಕಾಗಿ ಎಲ್ಲರ ಸಹಕಾರ ಬೇಕು. ಅಭಿವೃದ್ಧಿ ದೃಷ್ಠಿಯಿಂದ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಜನರ ಕೆಲಸ ಮಾಡುವುದರಲ್ಲಿ ಯಾವುದೇ ಸಬೂಬು ಬೇಡ. ಜನ ಸಾಮಾನ್ಯರ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು. ಕೆಲಸ ಆಗಿಲ್ಲಾ, ಲಂಚ ಪಡೆದಿದ್ದಾರೆ ಎಂಬ ದೂರು ಯಾವ ಇಲಾಖೆಯಿಂದಲೂ ಕೇಳ ಬಾರದು. ವಿವಿಧ ಅಭಿವೃದ್ಧಿ ಕೆಲಸ, ಜನರ ಕೆಲಸಗಳ ಬಗ್ಗೆ ಸಮರ್ಪಕವಾದ ಮಾಹಿತಿ, ವರದಿ ನೀಡಬೇಕು. ಕೆಲಸ ಆಗದಿದ್ದರೆ ಯಾಕೆ ಆಗಿಲ್ಲಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಖಡಕ್ ಸೂಚನೆ ನೀಡಿದರು. ನಾನು ಯಾವುದೇ ಹಣ ಮುಟ್ಟುವುದಿಲ್ಲ, ಅದೇ ರೀತಿ ಯಾವುದೇ ಅಧಿಕಾರಿ ಲಂಚ ಪಡೆದಿದ್ದಾರೆ ಎಂಬ ದೂರು ಬರಬಾರದು. ಸರಕಾರಿ ಕೆಲಸ ಅಂದರೆ ದೇವರ ಕೆಲಸ ಅದರಿಂದ ಜನರಿಗೆ ಒಳ್ಳೆಯ ಕೆಲಸ ಮಾಡಿ ಎಂದರು.
ಅಕ್ರಮ ಸಕ್ರಮ, 94ಸಿ, 94ಸಿಸಿ ಆದಷ್ಟು ಬೇಗ ಹಕ್ಕು ಪತ್ರ ನೀಡಬೇಕು. ಹಕ್ಕು ಪತ್ರ ಇಲ್ಲದ ಬಡವರಿಗೆ ಅಡಿ ಸ್ಥಳದ ಹಕ್ಕು ಪತ್ರ ನೀಡುವ ಕೆಲಸ ಆಗಬೇಕು. ಅದಕ್ಕಾಗಿ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಅವರು ತಹಶಿಲ್ದಾರ್ ಮಂಜುನಾಥ್ ಅವರಿಗೆ ಸೂಚಿಸಿದರು.
ಕ್ರೀಡಾಂಗಣ ಸಮಸ್ಯೆ ಶಾಶ್ವತ ಪರಿಹಾರ ಮಾಡಿ-ಆಗಾಗ ಸಮಸ್ಯೆ ಬರಬಾರದು:
ಕ್ರೀಡಾಂಗಣ ಕಾಮಗಾರಿ ಮತ್ತು ಮಣ್ಣು ತುಂಬಿಟ್ಟಿರುವುದಕ್ಕೆ ಶಾಶ್ವತ ಪರಿಹಾರ ಆಗಬೇಕು.
ಅಲ್ಲಿ ಆಗಬೇಕಾದ ಕೆಲಸ ಸಮರ್ಪಕವಾಗಿ ಮಾಡಬೇಕು.
ಆವಾಗ ಸಮಸ್ಯೆ ಕೇಳಿ ಬರಬಾರದು, ಸಾರ್ವಜನಿಕರಿಗೆ ತೊಂದರೆಯೂ ಆಗಬಾರದು ಎಂದು ಶಾಸಕರು ಸೂಚನೆ ನೀಡಿದರು. ಕ್ರೀಡಾಂಗಣದ ಕಾಮಗಾರಿ ಮತ್ತು ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗೆ ಅನುದಾನದ ಕೊರತೆ ಉಂಟಾಗಿದೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಹೇಳಿದರು. ಕ್ರೀಡಾಂಗಣ ಸಮಸ್ಯೆ ಕುರಿತು ಎಸಿ ಅಧ್ಯಕ್ಷತೆಯ ಕ್ರೀಡಾಂಗಣ ಸಮಿತಿ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.
ಹಾಸ್ಟೆಲ್ ಸ್ಥಳಾಂತರ ಬೇಡ:
ವಿದ್ಯಾರ್ಥಿಗಳ ಕೊರತೆಯಿಂದ ಬೆಳ್ಳಾರೆಯ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೇಲ್ ಮಂಗಳೂರಿಗೆ ಸ್ಥಳಾಂತರಿಸಲು ಮತ್ತು ವಿವೇಕಾನಂದದ ವೃತ್ತದ ಬಳಿಯ ಪ್ರಿಮೆಟ್ರಿಕ್ ಬಾಲಕಿಯರ ವಸತಿ ನಿಲಯ ಪೋಸ್ಟ್ ಮೆಟ್ರಿಕ್ ಬಾಲಕರ ವಸತಿ ನಿಲಯ ಮಾಡುವ ಬಗ್ಗೆ ಮೇಲಧಿಕಾರಿಗಳಿಂದ ಟಿಪ್ಪಣಿ ಬಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಇರುವ ಹಾಸ್ಟೆಲ್ ಹಾಗೆಯೇ ಮುಂದುವರಿಯಬೇಕು. ಯಾವುದೇ ಬದಲಾವಣೆ ಬೇಡ. ಹಾಸ್ಟೇಲ್ಗಳಿಗೆ ಹೆಚ್ಚು ಮಕ್ಕಳ ಸೇರಿಸಲು ಪ್ರಯತ್ನ ಮಾಡಿ ಎಂದು ಸೂಚಿಸಿದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಬೇಕು, ಅಪಘಾತ ಆದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ವ್ಯವಸ್ಥೆ ಆಗಬೇಕಾಗಿದೆ ಎಂದರು. ಪ್ರಾಕೃತಿಕ ವಿಕೋಪ ತಡೆಗೆ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಮಾಡಿ ಸಭೆ ನಡೆಸಲು ಸೂಚಿಸಲಾಗಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪ ಉಂಟಾದ 6 ಗ್ರಾಮ ಪಂಚಾಯತ್ನಲ್ಲಿ ವಿಶೇಷ ಗಮನ ನೀಡಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ ಹೇಳಿದರು. ತಹಶಿಲ್ದಾರ್ ಜಿ.ಮಂಜುನಾಥ್ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.