ಸುಳ್ಯ: ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಪವಿತ್ರ ಕ್ಷೇತ್ರ ಹಾಗು ಪುಣ್ಯಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಇ-ಪ್ರಸಾದ ಮತ್ತು ತೀರ್ಥ ವಿತರಣೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೋಮವಾರ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇ-ಪ್ರಸಾದಕ್ಕೆ ಚಾಲನೆ ನೀಡಿ ಮಾತನಾಡಿದ
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಧತ್ತಿ ಇಲಾಖೆಯಿಂದ ಅಂಚೆ ಕಚೇರಿ ಮೂಲಕ ಇ-ಪ್ರಸಾದವನ್ನು www.indiapost.gov.in ವೆಬ್ಸ್ಸೈಟ್ನಲ್ಲಿ ಆನ್ಲೈನ್ ಮೂಲಕ ಮತ್ತು ಸಹಾಯವಾಣಿ 18002666868 ಬುಕ್ ಮಾಡಿ 300 ರೂ. ಪಾವತಿಸಿದಲ್ಲಿ ಇ-ಪ್ರಸಾದವನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದರು.

ಇ-ಪ್ರಸಾದದಲ್ಲಿ ಕಾವೇರಿ ತೀರ್ಥ, ಪಂಚಕಜ್ಜಾಯ, ಕುಂಕುಮ, ಶ್ರೀಗಂಧ ಇರಲಿದೆ. ಭಕ್ತಾಧಿಗಳ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಸಾದ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಮಡಿಕೇರಿ ಅಂಚೆ ಕಚೇರಿಯ ಸೂಪರಿಂಟೆಂಡೆಂಟ್ ರಮೇಶ್ ಬಾಬು ಮಾಹಿತಿ ನೀಡಿ ವೆಬ್ ಸೈಟ್ ಮೂಲಕ ಬರುವ ಬೇಡಿಕೆಗೆ ಅನುಗುಣವಾಗಿ ಪ್ರಸಾದವನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಭಾರತದ ಒಳಗಿನ ಯಾವುದೇ ಪ್ರದೇಶಕ್ಕೆ ಪ್ರಸಾದವನ್ನು ತಲುಪಿಸಲಾಗುತ್ತದೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದೊರೆ, ದೇವಾಲಯದ ಪಾರುಪತ್ತೆಗಾರರಾದ ಕೆ.ಟಿ.ಪೊನ್ನಣ್ಣ, ಮಹೇಶ್ ಮತ್ತು ಪುನೀತ್ ಇತರರು ಇದ್ದರು.