ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 106 ರನ್ಗಳ ಸುಲಭ ಗೆಲುವು ಸಾಧಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿ 1–1 ರಲ್ಲಿ ಸಮನಾಯಿತು.ಯುವ ಆಟಗಾರ ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ (209) ಹೊಡೆದರೂ, ಮೊದಲ ಇನಿಂಗ್ಸ್ನ ಅಮೋಘ ದಾಳಿಯಲ್ಲಿ ಆರು ಮತ್ತು ಎರಡನೇ ಇನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆಯುವ
ಮೂಲಕ (ಒಟ್ಟು 91ಕ್ಕೆ9) ಮಿಂಚಿದ ಬೂಮ್ರಾ ‘ಪಂದ್ಯ ಶ್ರೇಷ್ಠ’ ಗೌರವ ಪಡೆದಿದರು.ಭಾರತ ತಂಡ ನೀಡಿದ್ದ 399 ರನ್ಗಳ ಗುರಿಗೆ ಉತ್ತರವಾಗಿ ಒಂದು ವಿಕೆಟ್ಗೆ 67 ರನ್ ಗಳಿಸಿದ್ದ ಇಂಗ್ಲೆಂಡ್ ಸೋಮವಾರ ಬೆಳಿಗ್ಗೆ ಬಿರುಸಿನ ಆರಂಭ ಮಾಡಿ ಆತಂಕ ಮೂಡಿಸಿತ್ತು. ಆದರೆ ಮೊದಲ ಒಂದು ಗಂಟೆಯ ನಂತರ ಭಾರತದ ಅನುಭವಿ ಬೌಲರ್ಗಳು ನಿಯಮಿತವಾಗಿ ತಿರುಗೇಟು ನೀಡಿದರು. ಚಹ ವಿರಾಮಕ್ಕೆ ಸರಿಯಾಗಿ 292 ರನ್ಗಳಿಗೆ ಆಲೌಟ್ ಆಯಿತು. ಆಕ್ರಮಣದ ಆಟದಿಂದ ಒತ್ತಡ ಹೇರುವ ಇಂಗ್ಲೆಂಡ್ ತಂಡದ ತಂತ್ರ ಈ ಬಾರಿ ಕೈಗೂಡಲಿಲ್ಲ.
ಆರಂಭ ಆಟಗಾರ ಜ್ಯಾಕ್ ಕ್ರಾಲಿ ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟದಲ್ಲಿ (72, 132 ಎಸೆತ, 8×4, 6×1) ಅರ್ಧ ಶತಕ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಅಂಥ ಕೊಡುಗೆ ಬರಲಿಲ್ಲ. ಸಾಂಘಿಕ ಯತ್ನದಲ್ಲಿ ಬೂಮ್ರಾ ಮತ್ತು ಅಶ್ವಿನ್ ತಲಾ ಮೂರು ವಿಕೆಟ್ ಪಡೆದರೆ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.