ಸುಳ್ಯ: ಕಳೆದ ಕೆಲವು ದಿನಗಳಿಂದ ಭಾರೀ ಬಿಸಿಲು ಮತ್ತು ಉಷ್ಣಾಂಶದ ವಾತಾವರಣ ಉಂಟಾಗಿದ್ದು ಮಾ.4 ರಂದು ಮತ್ತಷ್ಟು ಏರಿಕೆಯಾಗಿದೆ. ಸುಳ್ಯದಲ್ಲಿ ಮಧ್ಯಾಹ್ನದ ವೇಳೆಗೆ ಹಲವು ಕಡೆಯಲ್ಲಿ 39- 40 ಡಿಗ್ರಿ ಸೆಲ್ಸಿಯಸವರೆಗೆ ಏರಿಕೆಯಾಗಿದೆ.ಉರಿಯುವ ಬೆಂಕಿಯಂತಿರುವ ಬಿಸಿಲಿಗೆ ಭುವಿ ಕಾದ ಕಬ್ಬಿಣದಂತಾಗಿದೆ. ಬೆಳಿಗ್ಗಿನಿಂದಲೇ ಉಷ್ಣಾಂಶ
ಏರಿಕೆಯಾಗುತ್ತಿದ್ದು 11 ಗಂಟೆಯಿಂದಲೇ ಭಾರೀ ಬಿಸಿಲಿನ ವಾತಾವರಣ ಉಂಟಾಗಿದ್ದು 12-30- 1 ಗಂಟೆಯ ವೇಳೆಗೆ ಬಿಸಿಲ ಬೇಗೆ ಮತ್ತಷ್ಟು ಏರಿದೆ. 11 ಗಂಟೆಯಿಂದ 3 ಗಂಟೆಯ ತನಕ ಬಿಸಿಲು ಮತ್ತು ಉಷ್ಣಾಂಶ ಏರುಗತಿಯಲ್ಲಿದ್ದು ಜನತೆ ಮನೆಯಿಂದ ಹೊರ ಬರಲಾಗದೆ ಬಸವಳಿಯುವ ಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರಿಗೆ, ಪಾದಾಚಾರಿಗಳಿಗೆ ಬಿಸಿಲು ನೆತ್ತಿಗೆ ಬಡಿಯುತ್ತಿದ್ದು ಬೆಂಕಿಯಲ್ಲಿ ನಡೆದಾಡಿದ ಅನುಭವ ಉಂಟಾಗುತಿದೆ. ಎಲ್ಲೆಂದರಲ್ಲಿ ಜನರು ಬೆವರಿ ಬಸವಳಿಯುವ ಸ್ಥಿತಿ ನಿರ್ಮಾಣವಾಗಿದೆ. ಏರಿದ ಬಿಸಿಲಿಗೆ ತಲೆ ನೋವು ಮತ್ತಿತರ ಆರೋಗ್ಯ ಸಮಸ್ಯೆಗಳು ಕೂಡ ಕಂಡು ಬಂದಿದೆ. ಅಲ್ಲದೆ ವಾತಾವರಣವೇ ಬಿಸಿಯಾಗಿದ್ದು ಬಿಸಿ ಗಾಳಿ ಬೀಸುತಿದೆ. ಏರಿದ ಬಿಸಿಲು ಮತ್ತು ಉಷ್ಣಾಂಶಕ್ಕೆ ಅಲ್ಲಲ್ಲಿ ನೀರು ಕೂಡ ಕಡಿಮೆಯಾಗುತಿದೆ.ಬಾವಿ, ಕೊಳಗಳು ಬತ್ತ ತೊಡಗಿದೆ. ನದಿ,ಹಳ್ಳ, ತೋಡುಗಳಲ್ಲಿ ನೀರಿನ ಹರಿವು ಕಡಿಮೆಯಾಗುತಿದೆ. ಕೆಲವು ದಿನಗಳಿಂದ ಬಿಸಿಲಿನ ತಾಪ ಮತ್ತು ಉಷ್ಣಾಂಶ ಏರಿಕೆಯಾಗುತ್ತಿದ್ದು, ಮಾ.3ರಂದು ಕೂಡ 40-41 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು.