ಸುಳ್ಯ:ಮಾರ್ಚ್ ತಿಂಗಳಲ್ಲಿಯೇ ಉರಿ ಬಿಸಿಲು, ತೀವ್ರ ಉಷ್ಣಾಂಶ ದಾಖಲಾಗುತ್ತಿದ್ದು ಜನರು ಬೇಗೆಯಲ್ಲಿ ಬೆವತು, ಬೇಯುತ್ತಿದ್ದಾರೆ. ಸುಳ್ಯದಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು.ಸುಳ್ಯದಲ್ಲಿ ಗುರುವಾರ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ
ಬುಧವಾರ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.ರಾಜ್ಯದಲ್ಲಿಯೇ ದಾಖಲಾಗಿರುವ ಗರಿಷ್ಠ ತಾಪಮಾನ ಇದಾಗಿತ್ತು.ಸುಳ್ಯ ತಾಲೂಕಿನಲ್ಲಿ ಹಗಲಿನ ವೇಳೆ ಭಾರೀ ತಾಪಮಾನ ಏರಿದ್ದು ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ 32 ರಿಂದ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತದೆ. ಇದೀಗ ಮಾರ್ಚ್ ಆರಂಭದಲ್ಲಿಯೇ ತೀವ್ರ ಉಷ್ಣಾಂಶ ಏರಿಕೆಯಾಗಿದೆ.
ಬುಧವಾರ ಉತ್ತರ ಕನ್ನಡದಲ್ಲಿ 36.6, ಬೀದರ್ನಲ್ಲಿ ಗರಿಷ್ಠ 36.3, ರಾಯಚೂರಿನಲ್ಲಿ 36.1, ಉಡುಪಿಯಲ್ಲಿ 35.8, ಚಿಕ್ಕಮಗಳೂರಿನಲ್ಲಿ 34.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾ.12ರಂದು ಶಾಖದ ಅಲೆ ಹೆಚ್ಚುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.









