

ಸುಳ್ಯ: ಬೆಳೆಯುವ ಮಕ್ಕಳಿಗೆ ಕಲಿಕೆಯೊಂದಿಗೆ ಜೀವನ ಪಾಠ ತಿಳಿಸುವ ಜವಾಬ್ದಾರಿ ಶಿಕ್ಷಕರಿಗಿದೆ.ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಂಬಂಧಗಳು ಮತ್ತು ವಿದ್ಯಾರ್ಥಿಗಳನ್ನು ಅಧ್ಯಯನದ ಕಡೆಗೆ ಆಕರ್ಷಿಸುವಂತೆ ಮಾಡುವ ಮಹತ್ತರ ಕೆಲಸ ಶಿಕ್ಷಕರಿಂದಾಗಬೇಕಾಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ ಅಭಿಪ್ರಾಯಪಟ್ಟರು ಅವರು ಸುಳ್ಯ ಲಯನ್ಸ್ ಕ್ಲಬ್ ಇದರ ವತಿಯಿಂದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆದ
ಅಧ್ಯಾಪಕರುಗಳಿಗೆ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಅದರದ್ದೇ ಆದ ಮಹತ್ವವಿದೆ ಗುರುಕುಲ ಪದ್ಧತಿಯಿಂದ ಆರಂಭವಾದ ಶಿಕ್ಷಣ ಇದೀಗ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಬೋಧಿಸುವ ಮಟ್ಟಕ್ಕೆ ಮುಟ್ಟಿರುತ್ತದೆ . ಗುರು ಹಿರಿಯರ ಮೇಲಿನ ಪ್ರೀತಿ , ಬಾಂಧವ್ಯ ಗೌರವಗಳು ಮತ್ತು ಸಂಬಂಧಗಳ ಮೌಲ್ಯಗಳನ್ನು ಕಳೆದುಕೊಳ್ಳುವ ಈ ಸಂದರ್ಭದಲ್ಲಿ ಅಧ್ಯಾಪಕರಿಗೆ ಬೋಧನೆ ಮಾಡುವುದೇ ಒಂದು ಸವಾಲು . ಇಂತಹ ಸಮಯದಲ್ಲಿ ಶಿಕ್ಷಕರು ಕೂಡ ಸರಿಯಾದ ಮಾರ್ಗದರ್ಶನ ಪಡೆದು ಅದನ್ನು ಶಿಷ್ಯವೃಂದಕ್ಕೆ ಧಾರೆಯೆರೆಯ ಬೇಕಾದ ಅನಿರ್ವಾತೆ ಇದೆ . ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಮುಖ್ಯ ಅಥಿತಿಗಳಾದ ಲಯನ್ಸ್ ಕ್ಲಬ್ನ ಡಾ . ಮೆಲ್ವಿನ್ ಡಿಸೋಜಾ, ರೊನಾಲ್ಡ್ ಗೋಮ್ಸ್ ಸುಳ್ಯ ಲಯನ್ಸ್ ಕ್ಲಬ್ನ ಅಧ್ಯಕ್ಷೆ ರೂಪ ರೈ , ಕಾರ್ಯಕ್ರಮ ತರಬೇತುದಾರರಾದ ಕವಿತಾ ಶಾಸ್ತ್ರಿ , ಜಿಲ್ಲಾ ಸಂಯೋಜಕಿ ಮಂದಾಕಿನಿ ಉಪಾಧ್ಯಾಯ ಮತ್ತು ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಅರುಣ್ ಕುಮಾರ ಉಪಸ್ಥಿತರಿದ್ದರು.