ಸುಳ್ಯ:ಸುಳ್ಯ ಶಾಂತಿನಗರದಲ್ಲಿ ನಿರ್ಮಾಣ ನಡೆಯುತ್ತಿರುವ ಸುಳ್ಯ ತಾಲೂಕು ಕ್ರೀಡಾಂಗಣ ಕಾಮಗಾರಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಿಸಿದರು. ಅಧಿಕಾರಿಗಳು ಹಾಗೂ ಪ್ರಮುಖರು ಶಾಸಕರ ಜೊತೆಯಲ್ಲಿದ್ದರು. ಕ್ರೀಡಾಂಗಣ ಕಾಮಗಾರಿಯ ಸಂದರ್ಭದಲ್ಲಿ ಕ್ರೀಡಾಂಗಣದ ಕೆಳ ಭಾಗದಲ್ಲಿ ಹಾಕಿರುವ ಮಣ್ಣಿನಿಂದ ಕೆಳಗಿನ ಭಾಗದ ಮನೆಯವರು ಆತಂಕದಲ್ಲಿ ಕಳೆಯುವಂತಾಗಿದೆ. ಆದುದರಿಂದ ಕೆಳ
ಭಾಗದಲ್ಲಿ ಕೂಡಲೇ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಶಾಸಕರು ನಿರ್ಮಿತಿ ಕೇಂದ್ರದ ಇಂಜಿನಿಯರ್ಗೆ ನಿರ್ದೇಶನ ನೀಡಿದರು. ಪರ್ವತ ಮಾದರಿಯಲ್ಲಿ ಹಾಕಿದ ಮಣ್ಣನ್ನು ತಜ್ಞರ ಸಲಹೆಯಂತೆ ವಿವಿಧ ಹಂತಗಳಲ್ಲಿ ಸಮತಟ್ಟು ಮಾಡಿ ನೀರು ಹರಿದು ಹೋಗಲು ಅಲ್ಲಲ್ಲಿ ಪೈಪ್ ಅಳವಡಿಸಲಾಗಿದೆ. ಆದರೂ ಕೆಳ ಭಾಗದಲ್ಲಿರುವ ಮನೆಯವರ ಸುರಕ್ಷತೆಯ ದೃಷ್ಟಿಯಿಂದ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಶಾಸಕರು ಸೂಚಿಸಿದರು.
ಈಗಾಗಲೇ ಇರುವ ತಡೆಗೋಡೆಯನ್ನು ಬಲಪಡಿಸಿ, ಎತ್ತರಿಸಿ ಅಂದಾಜು ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಬಹುದು ಎಂದು ಇಂಜಿನಿಯರ್ ಹರೀಶ್ ಹೇಳಿದರು.ಅದರಂತೆ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕೂಡಲೇ ಕಾಮಗಾರಿ ಆರಂಭಿಸಿ ಎಂದು ಶಾಸಕರು ಹೇಳಿದರು. ನಿರ್ಮಿತಿ ಕೇಂದ್ರ ನಡೆಸುವ ಕಾಮಗಾರಿಯಲ್ಲಿ ಹೆಚ್ಚುವರಿ ಅನುದಾನ ಇದ್ದರೆ ಬಳಸಿ ನಿರ್ಮಾಣ ಮಾಡಿ ಅಥವಾ ಇತರ ಯಾವುದಾದರೂ ಅನುದಾನ ಒದಗಿಸಲು ಜಿಲ್ಲಾಧಿಕಾರಿಗಳಲ್ಲಿ ಮಾತನಾಡುತ್ತೇನೆ ಎಂದು ಶಾಸಕರು ಹೇಳಿದರು.
ಕ್ರೀಡಾಂಗಣ ಕಾಮಗಾರಿಯ ಬಗ್ಗೆ ಶಾಸಕರು ಅಧಿಕಾರಿಗಳು ಹಾಗೂ ಪ್ರಮುಖರ ಜೊತೆ ಚರ್ಚಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡಿದ ಒಂದು ಕೋಟಿ ಅನುದಾನದಲ್ಲಿ 400 ಮೀಟರ್ ಟ್ರಾಕ್ನ ಕ್ರೀಡಾಂಗಣ ನಿರ್ಮಾಣ ಆಗಲಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು.ಕಾಮಗಾರಿ ಆದಷ್ಟು ಶೀಘ್ರ ಪೂರ್ತಿ ಮಾಡಬೇಕು ಶಾಸಕರು ಹೇಳಿದರು. ಮಣ್ಣು ಹಾಕಿದ ಕಾರಣ ಉಂಟಾಗಿರುವ ಆತಂಕವನ್ನು ಸ್ಥಳೀಯರು ಶಾಸಕರಲ್ಲಿ ವಿವರಿಸಿದರು.
ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ವಿಎ ತಿಪ್ಪೇಶ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ವಿನಯಕುಮಾರ್ ಕಂದಡ್ಕ, ಬುದ್ಧ ನಾಯ್ಕ್, ಮಹೇಶ್ ಕುಮಾರ್ ಮೇನಾಲ, ಸ್ಥಳೀಯರಾದ ಡಾ.ಸುಂದರ್ ಕೇನಾಜೆ, ಗೌರಿಶಂಕರ, ನವನೀತ್ ಬೆಟ್ಟಂಪಾಡಿ, ಪೂಜಾ ಬೆಟ್ಟಂಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಮಗಾರಿಯಿಂದ ದುರಸ್ತಿಗೊಂಡಿರುವ ವಿದ್ಯುತ್ ಕಂಬವನ್ನು ಬದಲಿಸಲು ಶಾಸಕರು ಸೂಚಿಸಿದರು.