ಸುಳ್ಯ: ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮೂಲಭೂತ ಅಭಿವೃದ್ಧಿಗೆ ಸರಕಾರದಿಂದ 1.92 ಕೋಟಿ ರೂ ಅನುದಾನ ಮಂಜೂರಾಗಿದೆ.ಅಲ್ಲದೆ ಸರಕಾರದ ವತಿಯಿಂದ ಆಸ್ಪತ್ರೆಗೆ ಮತ್ತೊಂದು ಆಮ್ಲಜನಕ ಘಟಕ ನಿರ್ಮಾಣವಾಗಲಿದ್ದು 28 ಲಕ್ಷರೂ ಮಂಜೂರಾಗಿದೆ. ಒಟ್ಟು 2.20 ಕೋಟಿ ವೆಚ್ಚದಲ್ಲಿ ಆಮ್ಲಜನಕ ಘಟಕ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಉಪವಿಭಾಗದ ಮೂಲಕ ಸರಕಾರದಿಂದ
ಎಸ್‌ಸಿ ಎಸ್‌ಪಿ ಫಂಡ್‌ನಿಂದ ಮೂಲಭೂತ ಅಭಿವೃದ್ಧಿಗೆ 1.92 ಕೋಟಿ ಅನುದಾನ ಬಂದಿದೆ. ಈ ಅನುದಾನದಲ್ಲಿ ಮುಂದಿನ ಮಾರ್ಚ್‌ಗೆ ಮುಂಚಿತವಾಗಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಬೇಕಾಗಿದೆ. ಈ ಕುರಿತು ಆಗಬೇಕಾದ ಮೂಲಭೂತ ಅಗತ್ಯತೆಗಳ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಪ್ರಭಾರ) ರಾಜೇಶ್ ರೈ, ಕಿರಿಯ ಇಂಜಿನಿಯರ್ ರಾಘವೇಂದ್ರ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗು ಜನಪ್ರತಿನಿಧಿಗಳ ಜೊತೆ ಮಾತುಕತೆ

ನಡೆಸಿದರು.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ,ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸಾರ್ವಜನಿಕರಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಸುನಿಲ್ ಕೇರ್ಪಳ ಇವರೊಂದಿಗೆ ಇಂಜಿನಿಯರ್‌ಗಳು ಚರ್ಚೆ ನಡೆಸಿದರು.1.92 ಕೋಟಿ ರೂ ಮೊತ್ತದಲ್ಲಿ ಆಸ್ಪತ್ರೆಗೆ ಸುಸಜ್ಜಿತ ಶವಾಗಾರ, ಆಸ್ಪತ್ರೆಗೆ ಬರುವ ರಸ್ತೆಯ ಅಭಿವೃದ್ಧಿ, ಡಯಾಲಿಸಿಸ್ ಕೇಂದ್ರಕ್ಕೆ ಎಸಿ ಅಳವಡಿಕೆ ಮತ್ತಿತರ ಮೂಲಭೂತ ಅಭಿವೃದ್ಧಿ ಆಗಬೇಕಾಗಿದೆ ಎಂದು ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ ಹಾಗು ಸುನಿಲ್ ಕೇರ್ಪಳ ಸಲಹೆ ನೀಡಿದರು. ಚಂದ್ರಶೇಖರ ನೆಡಿಲು ಉಪಸ್ಥಿತರಿದ್ದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ಅವರೊಂದಿಗೆ ಚರ್ಚೆ ನಡೆಸಿ ಆಸ್ಪತ್ರೆಯ ಬೇಡಿಕೆಗಳ ಪಟ್ಟಿ ಪಡೆದು ಸಚಿವ ಅಂಗಾರ ಅವರಲ್ಲಿ ಚರ್ಚೆ ನಡೆಸಿ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು ಎಂದು ಇಂಜಿನಿಯರ್ ರಾಜೇಶ್ ರೈ ತಿಳಿಸಿದ್ದಾರೆ.
28 ಲಕ್ಷದಲ್ಲಿ ಆಮ್ಲಜನಕ ಘಟಕ ಮಂಜೂರು:
ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಸರಕಾರದಿಂದ ಆಮ್ಲಜನಕ ಘಟಕ ಮಂಜೂರಾಗಿದೆ. ಅದರಂತೆ ಸುಳ್ಯ ತಾಲೂಕು ಆಸ್ಪತ್ರೆಗೆ 28 ಲಕ್ಷ ಅನುದಾನ ಮಂಜೂರಾಗಿದೆ.ಆಮ್ಲಜನಕ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆ ಅಂತಿಮಗೊಂಡಿಲ್ಲ.6,000 ಲೀಟರ್ ಲಿಕ್ವಿಡ್ ಆಕ್ಸಿಜನ್ ಸಾಮರ್ಥ್ಯದ ಆಮ್ಲಜನಕ ಘಟಕ ನಿರ್ಮಾಣವಾಗಲಿದೆ. ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯ ವತಿಯಿಂದ ಸುಳ್ಯ ಸಾರ್ವಜನಿಕ ಆಸ್ಪತ್ರೆಗೆ ಆಮ್ಲಜನಕ ಘಟಕ ನಿರ್ಮಾಣಗೊಂಡಿದ್ದು ಈಗಾಗಲೇ ಕಾರ್ಯಾಚರಿಸುತಿದೆ.