ಸುಳ್ಯ:ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರು, ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಅನುರಾಧಾ ಕುರುಂಜಿ ಅಭಿಪ್ರಾಯಪಟ್ಟರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ .ಸುಳ್ಯ ತಾಲೂಕಿನ ದೊಡ್ಡೇರಿ ಕಾರ್ಯಕ್ಷೇತ್ರದಲ್ಲಿ ಅಮೃತ ಜ್ಞಾನವಿಕಾಸ ಕೇಂದ್ರದಲ್ಲಿ
ಮೂರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ಮಹಿಳೆ ಸ್ವಾವಲಂಬಿಯಾಗಿ ತಮ್ಮ ಕುಟುಂಬವನ್ನು ಮುನ್ನಡೆಸಲು ಸಹಾಯವಾಗುತ್ತದೆ ಎಂದರು.
ದೊಡ್ಡೇರಿ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಕೊಡಿಯಾಲ್ ಬೈಲು ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ ಸುಬ್ಬಯ್ಯ, ತಾಲೂಕು ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಬಾಲಕೃಷ್ಣ, ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಆಸ್ಪತ್ರೆಯ ಮೆಡಿಕಲ್ ಸೋಶಿಯಲ್ ವರ್ಕರ್ ಹೇಮಂತ್, ಹೊಲಿಗೆ ತರಬೇತಿ ನೀಡಿದ ಶಿಕ್ಷಕಿ ಹೇಮಾವತಿ ಮಾತನಾಡಿದರು.

ತರಬೇತಿಯಲ್ಲಿ ಭಾಗವಹಿಸಿದ ಸದಸ್ಯರಿಗೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ತರಬೇತಿ ಪಡೆದ ಕೃತಿ ಮತ್ತು ಚೇತನ ಅನಿಸಿಕೆ ವ್ಯಕ್ತಪಡಿಸಿದರು. ವಲಯ ಭಜನಾ ಪರಿಷತ್ ಕೋಶಾಧಿಕಾರಿ ರೇವತಿ ರಾಧಾಕೃಷ್ಣ, ಜನಜಾಗೃತಿ ಸದಸ್ಯ ಸುಂದರ ನಾಯ್ಕ, ವಲಯ ಮೆಲ್ವಿಚಾರಕಿ ಅನಿತಾ, ಕಾಂತಮಂಗಲ ಒಕ್ಕೂಟದ ಅಧ್ಯಕ್ಷ ಸತೀಶ್ , ಸೇವಾ ಪ್ರತಿನಿಧಿ ಉಷಾ ಒಕ್ಕೂಟದ ಪದಾಧಿಕಾರಿಗಳು, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾದಿಕಾರಿ ಲಕ್ಷ್ಮಿ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಪ್ರಗತಿ ಬಂಧು ಸಂಘದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಹೊಲಿಗೆ ತರಬೇತಿ ಪಡೆದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಯಿತು.









