ಮುಂಬೈ: ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ವಿರುದ್ಧ 29 ರನ್ಗಳ ಗೆಲುವು ಸಾಧಿಸಿದ ಭಾರತ ಶುಭಾರಂಭ ಮಾಡಿತು. ನಾಯಕ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಅರ್ಧ ಶತಕ ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ಸುಲಭ ಜಯ ಸಾಧಿಸಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ
ಅಮೆರಿಕ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಅಮೇರಿಕ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.ಅಮೇರಿಕಾ ಪರ ಸಂಜಯ್ ಕೃಷ್ಣಮೂರ್ತಿ ಹಾಗೂ ಶುಭಂ ರಂಜನೆ ತಲಾ 37 ರನ್ ಗಳಿಸಿದರೆ, ಮಿಲಿಂದ್ ಕುಮಾರ್ 34 ರನ್ ಗಳಿಸಿದರು. ಭಾರತದ ಪರ ಮಹಮ್ಮದ್ ಸಿರಾಜ್ 3, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ಸುರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ
ನಡೆಸಿದರು. ಸೂರ್ಯ ಔಟಾಗದೆ 49 ಎಸೆತಗಳಲ್ಲಿ 4 ಸಿಕ್ಸರ್, 10 ಬೌಂಡರಿ ಸಹಿತ 84 ರನ್ ಗಳಿಸಿದರು.ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಅವರನ್ನು ಔಟ್ ಮಾಡುವ ಮೂಲಕ ಶ್ಯಾಡ್ಲಿ ವ್ಯಾನ್ ಶಾಲ್ಕವೈಕ್ ಆಘಾತ ನೀಡಿದರು. ಬಳಿಕ ಬಂದ ತಿಲಕ್ ವರ್ಮಾ, ಶಿವಂ ದುಬೆ ಅವರಿಗೂ ಶಾಲ್ಕವೈಕ್ ಪೇವಿಲಿಯನ್ ಹಾದಿ ತೋರಿಸಿದರು.ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರು ಸೂರ್ಯ ಜವಾಬ್ದಾರಿಯುತ ಆಟ ಆಡಿದರು. ಒಂದು ಹಂತದಲ್ಲಿ 77 ರನ್ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಸೂರ್ಯ ಏಕಾಂಗಿಯಾಗಿ ಹೋರಾಟ ನಡೆಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದರು. ಇಶಾನ್ ಕಿಶನ್ 20, ಅಭಿಷೇಕ್ ಶರ್ಮ 0, ತಿಲಕ್ ವರ್ಮ 25, ರನ್ ಗಳಿಸಿದರು. ಅಮೆರಿಕ ಪರ ಶ್ಯಾಡ್ಲಿ ವ್ಯಾನ್ ಶಾಲ್ಕವೈಕ್ 4, ಹರಮೀತ್ ಸಿಂಗ್ 2, ಅಲಿ ಖಾನ್ ಹಾಗೂ ಮೊಹಮ್ಮದ್ ಮೊಹ್ಸಿನ್ ತಲಾ ಒಂದೊಂದು ವಿಕೆಟ್ ಪಡೆದರು. ಸೂರ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.







