ಪರ್ತ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ‘ಸೂಪರ್ 12’ ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನ ಎದುರು ಒಂದು ರನ್ ಅಂತರದ ರೋಚಕ ಜಯ ದಾಖಲಿಸಿದೆ.ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ ಬೌಲರ್‌ಗಳ ಕರಾರುವಾಕ್ ಬೌಲಿಂಗ್‌ಗೆ ನಲುಗಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 130 ರನ್
ಗಳಿಸಿತು.ಈ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ129 ರನ್ ಗಳಿಸಿ ಒಂದು ರನ್ ಸೋಲೊಪ್ಪಿಕೊಂಡಿತು.
ನಾಯಕ ಬಾಬರ್ ಅಜಂ (4) ಮತ್ತೊಮ್ಮೆ ವಿಫಲರಾದರು. ಮೊಹಮ್ಮದ್ ರಿಜ್ವಾನ್ (14) ಕೂಡ ನಿರಾಸೆ ಮೂಡಿಸಿದರು. ಬಳಿಕ ಬಂದ ಇಫ್ತಿಕಾರ್ ಅಹಮದ್ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಕೇವಲ 36ರನ್ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಶಾನ್ ಮಸೂದ್ ಮತ್ತು ಶಾಬದ್ ಖಾನ್ ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿದರು. ಇವರಿಬ್ಬರು 4ನೇ ವಿಕೆಟ್ ಪಾಲುದಾರಿಕೆಯಲ್ಲಿ 52 ರನ್ ಕೂಡಿಸಿದರು. ಆದರೆ, 17 ರನ್ ಗಳಿಸಿದ್ದ ಶಾಬದ್ ಔಟಾಗುತ್ತಿದ್ದಂತೆ ಪಾಕ್ ಪಡೆ ಮತ್ತೆ ಕುಸಿಯಲಾರಂಭಿಸಿತು. 6ನೇ ಕ್ರಮಾಂಕದಲ್ಲಿ ಬಂದ ಹೈದರ್ ಅಲಿ ಶೂನ್ಯಕ್ಕೆ ಔಟಾದರು. ತಂಡದ ಮೊತ್ತ 94 ರನ್ ಆಗಿದ್ದಾಗ ಶಾನ್ ಮಸೂದ್ (44) ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಜಿಂಬಾಬ್ವೆ ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಆದರೆ, ಪಾಕ್ ಸುಲಭವಾಗಿ
ಸೋಲೊಪ್ಪಲಿಲ್ಲ.ಮೊಹಮ್ಮದ್ ನವಾಜ್ (22) ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ (ಅಜೇಯ 18) ಪ್ರತಿರೋಧ ತೋರಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕೊನೇ ಓವರ್‌ನ ಐದನೇ ಎಸೆತಗಳಲ್ಲಿ ನವಾಜ್ ವಿಕೆಟ್ ಒಪ್ಪಿಸಿದರು. ಅಂತಿಮ ಎಸೆತದಲ್ಲಿ ಮೂರು ರನ್ ಬೇಕಿದ್ದಾಗ ಶಾಹಿನ್ ಅಫ್ರಿದಿ (1) ರನೌಟ್ ಆದರು. ಹೀಗಾಗಿ ಪಾಕ್ ಪಡೆ 1 ರನ್ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಪಾಕ್ ಪರ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಮೊಹಮ್ಮದ್ ವಾಸಿಂ ಜೂನಿಯರ್ 4 ಓವರ್‌ಗಳಲ್ಲಿ 24 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿದರು. ಅವರಿಗೆ ಸಾಥ್ ನೀಡಿದ ಶಾಬದ್ ಖಾನ್ 3 ವಿಕೆಟ್ ಉರುಳಿಸಿದರೆ, ಹ್ಯಾರಿಸ್ ರವೂಫ್ ಒಂದು ವಿಕೆಟ್ ಕಿತ್ತರು.