ನವದೆಹಲಿ: ಗಾಯದ ಸಮಸ್ಯೆ ಎದುರಿಸುತ್ತಿರುವ ದೀಪಕ್ ಚಾಹರ್, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಮತ್ತೊಂದೆಡೆ ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದು, ಶೀಘ್ರದಲ್ಲೇ ಟೀಮ್ ಇಂಡಿಯಾ ಕ್ಯಾಂಪ್ ಸೇರಲಿದ್ದಾರೆ. ಈ ಮೊದಲು ಟ್ವೆಂಟಿ-20 ವಿಶ್ವಕಪ್‌ಗೆ ಘೋಷಿಸಿದ ಟೀಮ್ ಇಂಡಿಯಾದ ಮೀಸಲು ಆಟಗಾರರ ಪಟ್ಟಿಯಲ್ಲಿ ಚಾಹರ್ ಸ್ಥಾನ
ಗಿಟ್ಟಿಸಿದ್ದರು. ಅಲ್ಲದೆ ಈಗಾಗಲೇ ನಿರ್ಗಮಿಸಿರುವ ಜಸ್‌ಪ್ರೀತ್ ಬೂಮ್ರಾ ಸ್ಥಾನವನ್ನು ತುಂಬುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು.
ಆದರೆ ಈಗ ಗಾಯದ ಸಮಸ್ಯೆಗೆ ಒಳಗಾಗಿರುವ ಚಾಹರ್, ಆಯ್ಕೆಗೆ ಅಲಭ್ಯರಾಗಿದ್ದಾರೆ. ಅಲ್ಲದೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಚಾಹರ್ ಆಡಿದ್ದರು. ಆದರೆ ಗಾಯದಿಂದಾಗಿ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಬೂಮ್ರಾ ಬದಲಿ ಆಟಗಾರನನ್ನು ಘೋಷಿಸಲು ಅಕ್ಟೋಬರ್ 15ರವರೆಗೆ ಕಾಲಾವಕಾಶವಿದೆ. ಹಾಗಾಗಿ ಶಮಿ, ಸಿರಾಜ್ ಹಾಗೂ ಶಾರ್ದೂಲ್ ಪೈಕಿ ಯಾವ ಆಟಗಾರನಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಟ್ವೆಂಟಿ-20 ವಿಶ್ವಕಪ್‌ಗೆ ಭಾರತ ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಅಕ್ಷರ್ ಪಟೇಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಶದೀಪ್ ಸಿಂಗ್.