ಆಸ್ಟ್ರೇಲಿಯಾ: ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡಗಳು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಸೂಪರ್ 12’ ಹಂತ ಪ್ರವೇಶಿಸಿದವು. ನಮೀಬಿಯ ತಂಡದ ಅರ್ಹತೆಯ ಹಾದಿಗೆ ಯುಎಇ ಅಡ್ಡಿಯಾಗಿ ಪರಿಣಮಿಸಿತು.
ಗುರುವಾರ ನಡೆದ ಅರ್ಹತಾ ಸುತ್ತಿನ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ, 16 ರನ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಮಣಿಸಿತು. ದಸುನ್ ಶನಕ ಬಳಗ ಒಟ್ಟು ನಾಲ್ಕು ಪಾಯಿಂಟ್ಸ್ ಗಳಿಸಿ ಗುಂಪಿನಲ್ಲಿ
ಅಗ್ರಸ್ಥಾನ ಪಡೆದು ಪ್ರಧಾನ ಹಂತಕ್ಕೆ ಮುನ್ನಡೆಯಿತು. ಸೋಲು ಅನುಭವಿಸಿದರೂ ನೆದರ್ಲೆಂಡ್ಸ್, ಎರಡನೇ ಸ್ಥಾನ (4 ಪಾಯಿಂಟ್ಸ್) ಪಡೆದು ಅರ್ಹತೆ ಗಳಿಸಿತು.ದಿನದ ಇನ್ನೊಂದು ಪಂದ್ಯದಲ್ಲಿ ಯುಎಇ ತಂಡ ನಮೀಬಿಯನ್ನು ಮಣಿಸಿದ್ದು, ನೆದರ್ಲೆಂಡ್ಸ್ ಹಾದಿ ಸುಗಮಗೊಳಿಸಿತು. ನಮೀಬಿಯ ಗೆದ್ದಿದ್ದರೆ ಉತ್ತಮ ರನ್‌ರೇಟ್ ಆಧಾರದಲ್ಲಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು, ನೆದರ್ಲೆಂಡ್ಸ್ ತಂಡವನ್ನು ಹಿಂದಿಕ್ಕಿ ಅರ್ಹತೆ ಪಡೆಯುತ್ತಿತ್ತು. ತಲಾ ಒಂದು ಗೆಲುವಿನೊಂದಿಗೆ ಎರಡು ಪಾಯಿಂಟ್ಸ್ ಗಳಿಸಿದ ಯುಎಇ ಮತ್ತು ನಮೀಬಿಯ ಟೂರ್ನಿಯಿಂದ ಹೊರಬಿದ್ದವು.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ಕುಸಾಲ್ ಮೆಂಡಿಸ್ (79 ರನ್, 44 ಎ., 4X5, 6X5) ಅವರ ಅರ್ಧಶತಕದ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್ ಪೇರಿಸಿತು.
ನೆದರ್ಲೆಂಡ್ಸ್ ತಂಡದ ಹೋರಾಟ 9 ವಿಕೆಟ್‌ಗೆ 146 ರನ್‌ಗಳಿಗೆ ಸೀಮಿತಗೊಂಡಿತು. ದಿನದ ಎರಡನೇ ಪಂದ್ಯದಲ್ಲಿ ಯುಎಇ 7 ರನ್‌ಗಳಿಂದ ನಮೀಬಿಯ ವಿರುದ್ಧ ಗೆದ್ದಿತು.
ಮೊದಲು ಬ್ಯಾಟ್ ಮಾಡಿದ ಯುಎಇ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ಗೆ 148 ರನ್ ಗಳಿಸಿತು. ನಮೀಬಿಯ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 141 ರನ್ ಗಳಿಸಿತು.