ನವದೆಹಲಿ:ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ವಿಕೆಟ್ಕೀಪರ್ ಇಶಾನ್ ಕಿಶನ್ ಮತ್ತು ಸ್ಫೋಟಕ ಶೈಲಿಯ ಬ್ಯಾಟರ್ ರಿಂಕು ಸಿಂಗ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ ಬ್ಯಾಟಿಂಗ್ ಲಯ ಕಂಡುಕೊಳ್ಳದ ಶುಭಮನ್ ಗಿಲ್ ಅವರಿಗೆ ಕೊಕ್ ನೀಡಲಾಗಿದೆ. 15 ಆಟಗಾರರ ತಂಡಕ್ಕೆ
ಸೂರ್ಯಕುಮಾರ್ ಯಾದವ್ ನಾಯಕರಾಗಿ ಮುಂದುವರಿದಿದ್ದಾರೆ. ಅವರು ಕೂಡ ಬ್ಯಾಟಿಂಗ್ ಲಯಕ್ಕಾಗಿ ಪರದಾಡುತ್ತಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ ಭಾರತ ತಂಡವು ಏಷ್ಯಾ ಕಪ್ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಜಯಿಸಿತ್ತು.
ಕಳೆದೊಂದು ವರ್ಷದಲ್ಲಿ ಯಾವುದೇ ಟೂರ್ನಿಗೂ ಇಶಾನ್ ಕಿಶನ್ ಅವರನ್ನು ಪರಿಗಣಿಸಿರಲಿಲ್ಲ. ಎಡಗೈ ಬ್ಯಾಟರ್ ಮತ್ತು ವಿಕೆಟ್ಕೀಪರ್ ಇಶಾನ್ ಅವರ ನಾಯಕತ್ವದಲ್ಲಿ ಈಚೆಗೆ ಜಾರ್ಖಂಡ್ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಚಾಂಪಿಯನ್ ಆಗಿತ್ತು. ಇಶಾನ್ ಅಮೋಘ ಶತಕ ಕೂಡ ಹೊಡೆದಿದ್ದರು.
ಇಶಾನ್ ಸ್ಥಾನ ಪಡೆದ ಕಾರಣ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ವಿಕೆಟ್ಕೀಪರ್ ಜಿತೇಶ್ ಶರ್ಮಾ ಅವರಿಗೆ ಸ್ಥಾನ ಕೈತಪ್ಪಿದೆ. ಅಭಿಷೇಕ್ ಶರ್ಮಾ, ಇಶಾನ್, ತಿಲಕ್ ವರ್ಮಾ, ರಿಂಕು ಮತ್ತು ಸೂರ್ಯಕುಮಾರ್ ಯಾದವ್ ಅವರು ಇರುವುದರಿಂದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆಯು ಬಲಾಢ್ಯವಾಗಿದೆ.ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಂದಾಗಿ ತಂಡವು ಸಮತೋಲನಗೊಂಡಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವಿ ಮತ್ತು ಉದಯೋನ್ಮುಖ ಬೌಲರ್ಗಳಿದ್ದಾರೆ. ಕುಲದೀಪ್ ಯಾದವ್ ಸ್ಪಿನ್ ವಿಭಾಗದ ಶಕ್ತಿ ಹೆಚ್ಚಿಸುವ ನಿರೀಕ್ಷೆ ಇದೆ.ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರುವರಿ 7ರಿಂದ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಒಂದು ತಿಂಗಳ ಕಾಲ ಆಯೋಜನೆಗೊಳ್ಳಲಿದೆ.
ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ವಾಷಿಂಗ್ಟನ್ ಸುಂದರ್, ವರುಣ ಚಕ್ರವರ್ತಿ, ಇಶಾನ್ ಕಿಶನ್ (ವಿಕೆಟ್ಕೀಪರ್), ರಿಂಕು ಸಿಂಗ್.













