ಬ್ರಿಜ್ಟೌನ್: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಒಮನ್ ಎದುರು ಗೆದ್ದು ಶುಭಾರಂಭ ಮಾಡಿದೆ.ಇಲ್ಲಿನ ಕಿಂಗ್ಸ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂದ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಗುರಿ ಬೆನ್ನತ್ತಿದ ಒಮನ್ 20 ಓವರ್ಗಳಲ್ಲಿ
9 ವಿಕೆಟ್ ಕಳೆದುಕೊಂಡು 125 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ್ ಅಕೀಬ್ ಇಲ್ಯಾಸ್ (18 ರನ್) ಮತ್ತು ಅಯಾನ್ ಖಾನ್ (18 ರನ್) ಹೊರತುಪಡಿಸಿ ಉಳಿದವರಿಂದ ಉತ್ತಮ ಆಟ ಸಾಧ್ಯವಾಗಲಿಲ್ಲ.
ಆಸಿಸ್ ಪರ ಉತ್ತಮ ಬೌಲಿಂಗ್ ಮಾಡಿದ ಮಾರ್ಕಸ್ ಸ್ಟೋಯಿನಸ್, 19 ರನ್ ನೀಡಿ ಮೂರು ವಿಕೆಟ್ ಪಡೆದರು. ಅವರಿಗೆ ಉತ್ತಮ ಸಹಕಾರ ನೀಡಿದ ನಾಯಕ ಮಿಚೇಲ್ ಮಾರ್ಷ್, ಆ್ಯಡಂ ಜಂಪಾ ಹಾಗೂ ನಾಥನ್ ಎಲ್ಲಿಸ್ ತಲಾ ಎರಡು ವಿಕೆಟ್ ಹಂಚಿಕೊಂಡರು.
ಮೊದಲು ಬ್ಯಾಟ್ ಮಾಡಿದ ಆಸಿಸ್ ಪಡೆ 50 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತು ಆಘಾತ ನೀಡಿತು. ಆದರೆ, ಕೊನೇ ಹಂತದಲ್ಲಿ ಹಿಡಿತ ಸಡಿಲಿಸಿ ಕೈ ಸುಟ್ಟುಕೊಂಡಿತು.
ಪ್ರಮುಖ ಬ್ಯಾಟರ್ ಟ್ರಾವಿಸ್ ಹೆಡ್ (12), ಮಾರ್ಷ್ (14) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (0) ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು.ಈ ಹಂತದಲ್ಲಿ ಜೊತೆಯಾದ ಡೇವಿಡ್ ವಾರ್ನರ್ ಮತ್ತು ಸ್ಟೋಯಿನಸ್ ತಮ್ಮ ತಂಡಕ್ಕೆ ಆಸರೆಯಾದರು. ಇವರಿಬ್ಬರು ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 10.2 ಓವರ್ಗಳಲ್ಲಿ 102 ರನ್ ಕಲೆಹಾಕಿದರು. ರಕ್ಷಣಾತ್ಮಕ ಆಟವಾಡಿದ ವಾರ್ನರ್ 51 ಎಸೆತಗಳಲ್ಲಿ 56 ರನ್ ಗಳಿಸಿದರೆ, ಸ್ಟೋಯಿನಸ್ ಸ್ಫೋಟಕ ಅರ್ಧಶತಕ ಸಿಡಿಸಿದರು. 36 ಎಸೆತ ಎದುರಿಸಿದ ಅವರ ಇನಿಂಗ್ಸ್ನಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಿತ 67 ರನ್ ಇದ್ದವು.
ಒಮನ್ ಪರ ಮೆಹ್ರಾನ್ ಖಾನ್ ಎರಡು ವಿಕೆಟ್ ಪಡೆದರೆ, ಬಿಲಾಲ್ ಖಾನ್ ಮತ್ತು ಕಲೀಲ್ಮುಲ್ಲಾ ಒಂದೊಂದು ವಿಕೆಟ್ ಕಿತ್ತರು.