ಹೋಬರ್ಟ್: ಐರ್ಲೆಂಡ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ ಮಾಜಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ. ಇಲ್ಲಿನ ಬೆಲ್ಲೆರೈವ್ ಓವಲ್ ಕ್ರೀಡಾಂಗಣದಲ್ಲಿ 9 ವಿಕೆಟ್ ಅಂತರದ ಜಯ ಸಾಧಿಸಿದ ಐರ್ಲೆಂಡ್ ಟೂರ್ನಿಯ ಸೂಪರ್ 12ರ ಹಂತಕ್ಕೆ ಅರ್ಹತೆ
ಗಿಟ್ಟಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿತು. ಐರ್ಲೆಂಡ್ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಈ ಜಯದೊಂದಿಗೆ ಐರ್ಲೆಂಡ್ ಎರಡನೇ ಬಾರಿಗೆ ವಿಶ್ವಕಪ್‌ನ ಎರಡನೇ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಎರಡು ಬಾರಿ ವಿಶ್ವ ಚಾಂಪಿಯನ್ ವಿಂಡೀಸ್ ಪಡೆ, ಅರ್ಹತಾ ಸುತ್ತಿನಿಂದಲೇ ನಿರ್ಗಮಿಸಿದೆ. ಇಂದಿನ ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿದ ಜಿಂಬಾಬ್ವೆ ‘ಸೂಪರ್ 12′ ಹಂತಕ್ಕೆ ಪ್ರವೇಶ ಪಡೆಯಿತು. ಸೂಪರ್ 12’ ಹಂತದ ಪಂದ್ಯಗಳು ಶನಿವಾರ (ಅಕ್ಟೋಬರ್ 22 ರಿಂದ) ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸೆಣಸಲಿವೆ. ಅದೇ ದಿನ ನಡೆಯುವ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಅಫ್ಗಾನಿಸ್ತಾನ ಮುಖಾಮುಖಿಯಾಗಲಿವೆ. ಭಾನುವಾರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪಂದ್ಯ ನಡೆಯಲಿದೆ.