ಸಿಡ್ನಿ,: ನ್ಯೂಝಿಲ್ಯಾಂಡ್ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12 ಸುತ್ತಿನ ಮೊದಲ ಪಂದ್ಯದಲ್ಲಿ 89 ರನ್ಗಳ ಅಂತರದಿಂದ ಜಯ ಸಾಧಿಸಿದೆ. ಡೆವೆನ್ ಕಾನ್ವೇ ಭರ್ಜರಿ ಅರ್ಧಶತಕ(ಔಟಾಗದೆ 92, 58 ಎಸೆತ), ಟಿಮ್ ಸೌಥಿ (3-6),ಮಿಚೆಲ್ ಸ್ಯಾಂಟ್ನರ್(3-31)ಹಾಗೂ ಟ್ರೆಂಟ್ ಬೌಲ್ಟ್(2-24) ಅಮೋಘ ಬೌಲಿಂಗ್ ನೆರವಿನಿಂದ ನ್ಯೂಝಿಲ್ಯಾಂಡ್ ಶುಭಾರಂಭ
ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 200 ರನ್ ಗಳಿಸಿತು. ಗೆಲ್ಲಲು 201 ರನ್ ಸವಾಲು ಪಡೆದ ಆಸ್ಟ್ರೇಲಿಯವು 17.1 ಓವರ್ಗಳಲ್ಲಿ ಕೇವಲ 111ರನ್ಗೆ ಆಲೌಟಾಯಿತು. ಆತಿಥೇಯರ ಪರ ಗ್ಲೆನ್ ಮ್ಯಾಕ್ಸ್ವೆಲ್(28 ರನ್,20 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಪ್ಯಾಟ್ ಕಮಿನ್ಸ್ 21 ರನ್ ಗಳಿಸಿದರು.ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಕಿವೀಸ್ ಪರ 2.1 ಓವರ್ಗಳಲ್ಲಿ ಕೇವಲ 6 ರನ್ ನೀಡಿದ ಸೌಥಿ ಮೂರು ವಿಕೆಟ್ಗಳನ್ನು ಉರುಳಿಸಿ ಗಮನ ಸೆಳೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ತಂಡದ ಆರಂಭಿಕ ಬ್ಯಾಟರ್ಗಳಾದ ಕಾನ್ವೇ(ಔಟಾಗದೆ 92,58 ಎಸೆತ, 7 ಬೌಂಡರಿ, 2 ಸಿಕ್ಸರ್)ಹಾಗೂ ಫಿನ್ ಅಲ್ಲೆನ್(42 ರನ್, 16 ಎಸೆತ, 5 ಬೌಂಡರಿ, 3 ಸಿಕ್ಸರ್)4.1 ಓವರ್ಗಳಲ್ಲಿ 56 ರನ್ ಗಳಿಸಿ ಬಿರುಸಿನ ಆರಂಭ ನೀಡಿದರು. ಅಲ್ಲೆನ್ ಕೇವಲ 16 ಎಸೆತಗಳಲ್ಲಿ 42 ರನ್ ಗಳಿಸಿ ಅಬ್ಬರಿಸಿದರು. ಇನ್ನುಳಿದಂತೆ ನಾಯಕ ಕೇನ್ ವಿಲಿಯಮ್ಸನ್ 23 ರನ್, ಜೇಮ್ಸ್ ನಿಶಾಮ್ ಔಟಾಗದೆ 26 ರನ್ ಕೊಡುಗೆ ನೀಡಿದರು.ಜೋಶ್ ಹೇಝಲ್ವುಡ್ 2 ವಿಕೆಟ್ ಪಡೆದರು.