ಚೆನ್ನೈ/ಮುಂಬೈ: ಆರಂಭ ಆಟಗಾರ ಟಿಮ್ ಸೀಫರ್ಟ್ (65 42 ಎಸೆತ) ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು, ಟಿ29 ವಿಶ್ವಕಪ್ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡದ ಮೇಲೆ ಐದು ವಿಕೆಟ್ಗಳ ಗೆಲುವು ಪಡೆಯಿತು.ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾನುವಾರ ಅನನುಭವಿ ನೇಪಾಳ ಕೈಲಿ ಸ್ವಲ್ಪದರಲ್ಲೇ ಸೋಲಿನಿಂದ ಪಾರಾಯಿತು. ರೋಚಕವಾಗಿದ್ದ ಟಿ20 ವಿಶ್ವಕಪ್ ಸಿ ಗುಂಪಿನ ಹಣಾಹಣಿಯಲ್ಲಿ
ನೇಪಾಳ ತಂಡ ಕೊನೆಯ ಓವರಿನವರೆಗೆ ಹೋರಾಟ ತೋರಿದರೂ, ಇಂಗ್ಲೆಂಡ್ ನಾಲ್ಕು ರನ್ಗಳ ಗೆಲುವು ಪಡೆಯಿತು.
ಭಾನುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ 6 ವಿಕೆಟ್ಗೆ 182 ರನ್ ಹೊಡೆಯಿತು. ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ (42) ಅವರ ಆಟದಿಂದ ನ್ಯೂಜಿಲೆಂಡ್ 13 ಎಸೆತಗಳು ಉಳಿದಿರುವಂತೆ 17.5 ಓವರುಗಳಲ್ಲಿ 5 ವಿಕೆಟ್ಗೆ 183 ರನ್ ಹೊಡೆಯಿತು.
ಸಂಕ್ಷಿಪ್ತ ಸ್ಕೋರು:
ಅಫ್ಗಾನಿಸ್ತಾನ: 20 ಓವರುಗಳಲ್ಲಿ 6 ವಿಕೆಟ್ಗೆ 182 (ರಹಮಾನುಲ್ಲಾ ಗುರ್ಬಾಝ್ 27, ಗುಲ್ಬದ್ದಿನ್ ನೈಬ್ 63, ಸೇದಿಕುಲ್ಲಾ ಅಟಲ್ 29, ಲಾಕಿ ಫರ್ಗ್ಯೂಸನ್ 40ಕ್ಕೆ2)
ನ್ಯೂಜಿಲೆಂಡ್: 17.5 ಓವರುಗಳಲ್ಲಿ 5 ವಿಕೆಟ್ಗೆ 183 (ಟಿಮ್ ಸೀಫರ್ಟ್ 65, ಗ್ಲೆನ್ ಫಿಲಿಪ್ಸ್ 42, ಮಾರ್ಕ್ ಚಾಪ್ಮನ್ 28, ಡೇರಿಲ್ ಮಿಚೆಲ್ ಔಟಾಗದೇ 25; ಮುಜೀಬ್ ಉರ್ ರೆಹಮಾನ್ 31ಕ್ಕೆ2).
ಇಂಗ್ಲೆಂಡ್ ತಂಡ 7 ವಿಕೆಟ್ಗೆ 184 ರನ್ ಹೊಡೆಯಿತು. ಇದಕ್ಕೆ ಉತ್ತರವಾಗಿ ನೇಪಾಳ ತಂಡ 6 ವಿಕೆಟ್ಗೆ 180 ರನ್ ಗಳಿಸಿ ನಿರಾಶೆ ಅನುಭವಿಸಿತು.
ವೀರೋಚಿತ ಆಟವಾಡಿದ ಲೋಕೇಶ್ ಬಾಮ್ (ಔಟಾಗದೇ 39, 20 ಎಸೆತ) ಅವರು ನೇಪಾಳ ತಂಡವನ್ನು ಗೆಲುವಿನತ್ತ ಮುನ್ನಡೆಸುವಂತೆ ಕಂಡಿತ್ತು.ಕೊನೆಯ ಓವರಿನಲ್ಲಿ ನೇಪಾಳ ಗೆಲುವಿಗೆ 10 ರನ್ಗಳು ಬೇಕಿದ್ದವು. ಆದರೆ ವೇಗಿ ಸ್ಯಾಮ್ ಕರನ್ ಯಾರ್ಕರ್ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು. ತಂಡ ಐದು ರನ್ ಗಳಿಸಲಷ್ಟೇ ಶಕ್ತವಾಯಿತು.
ನಾಯಕ ರೋಹಿತ್ ಪೌದೆಲ್ (39), ದೀಪೇಂದ್ರ ಸಿಂಗ್ ಐರಿ (39) ಮತ್ತು ಕುಶಲ್ ಭುರ್ತೆಲ್ (29) ಅವರು ತಂಡದ ಹೋರಾಟಕ್ಕೆ ಬಲ ನೀಡಿದ ಬಳಿ ಲೋಕೇಶ್ ಬೀಸಾಟವಾಡಿದರು. ನಾಲ್ಕು ಬೌಂಡರಿ ಜೊತೆ ಎರಡು ಸಿಕ್ಸರ್ ಬಾರಿಸಿದರು.
ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಜೇಕಬ್ ಬೆಥೆಲ್ (55) ಮತ್ತು ನಾಯಕ ಹ್ಯಾರಿ ಬ್ರೂಕ್ (53) ಅವರ ಆಕ್ರಮಣಕಾರಿ ಅರ್ಧ ಶತಕಗಳ ನೆರವಿನಿಂದ 7 ವಿಕೆಟ್ಗೆ 184 ರನ್ಗಳ ಉತ್ತಮ ಮೊತ್ತ ಗಳಿಸಿತು.ಕೊನೆಯಲ್ಲಿ ವಿಲ್ ಜಾಕ್ಸ್ 18 ಎಸೆತಗಳಲ್ಲಿ 39 ರನ್ ಸೂರೆ ಮಾಡಿದ್ದರಿಂದ ಇಂಗ್ಲೆಂಡ್ ಸವಾಲಿನ ಮೊತ್ತ ಗಳಿಸಿತು.
ಸಂಕ್ಷಿಪ್ತ ಸ್ಕೋರು:
ಇಂಗ್ಲೆಂಡ್: 20 ಓವರುಗಳಲ್ಲಿ 7 ವಿಕೆಟ್ಗೆ 184 (ಜೋಸ್ ಬಟ್ಲರ್ 26, ಬೆಥೆಲ್ 55, ಹ್ಯಾರಿ ಬ್ರೂಕ್ 53, ವಿಲ್ ಜಾಕ್ಸ್ ಔಟಾಗದೇ 39; ದೀಪೇಂದ್ರ ಐರೀ 23ಕ್ಕೆ2, ನಂದನ್ ಯಾದವ್ 25ಕ್ಕೆ2)
ನೇಪಾಳ: 20 ಓವರುಗಳಲ್ಲಿ 6 ವಿಕೆಟ್ಗೆ 180 (ಕುಶಲ್ ಭುರ್ತೆಲ್ 29, ರೋಹಿತ್ ಪೌದೆಲ್ 39, ದೀಪೇಂದ್ರ ಸಿಂಗ್ ಐರೀ 44, ಲೋಕೇಶ್ ಬಾಮ್ ಔಟಾಗದೇ 39; ಲಿಯಾಮ್ ಡಾಸನ್ 21ಕ್ಕೆ2).







