ಕೋಯಿಕ್ಕೋಡ್: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಉಂಟಾದ ಭೂಕುಸಿತದಲ್ಲಿ ಕಣ್ಮರೆಯಾದ ಕೇರಳದ ಕೋಯಿಕ್ಕೋಡ್ನ ಟ್ರಕ್ ಡ್ರೈವರ್ ಅರ್ಜುನ್ ಅವರ ಕೋಯಿಕ್ಕೋಡಿನ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಭೇಟಿ ನೀಡಿದರು. ಭಾನುವಾರ ಅರ್ಜುನ್ ಅವರ ಮನೆಗೆ ಭೇಟಿ ನೀಡಿದ ಅವರು
ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಣ್ಮರೆಯಾದ ಅರ್ಜುನ್ ಹಾಗೂ ಟ್ರಕ್ ಪತ್ತೆ ಮಾಡಲು ಎಲ್ಲಾ ರೀತಿಯ ಕಾರ್ಯಾಚರಣೆ ನಡೆಸಲಾಗುತಿದೆ ಎಂದು ಅವರು ಹೇಳಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಭೂಕುಸಿತದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಕರ್ನಾಟಕ ಸರಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಶಿರೂರಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಅವಲೋಕನ ಮಾಡಿದ್ದಾರೆ. ಭೀಕರ ಮಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 10 ಮಂದಿ ಸಿಲುಕಿ ಕಣ್ಮರೆಯಾಗಿದ್ದರು. ಇದರಲ್ಲಿ 7 ಮಂದಿಯ ಮೃತದೇಹ ಪತ್ತೆಯಾಗಿದ್ದು. ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತಿದೆ ಎಂದು ಹೇಳಿದರು.