ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ತಡೆಯಲು ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದದಾಗಿ ಗೃಹ ಸಚಿವರಾದ ಜಿ.ಪರಮೇಶ್ವರ್ ಘೋಷಿಸಿರುವುದು ಸ್ವಾಗತಾರ್ಹ ಎಂದು ಮುಸ್ಲೀಂ ಯೂತ್ ಕೌನ್ಸಿಲ್ನ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಶಾಂತಿ, ಸಾಮರಷ್ಯ, ಕೋಮು ಸೌಹಾರ್ಧತೆ ಅತೀ
ಅಗತ್ಯ. ಇದಕ್ಕೆ ಇಲಾಖೆ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಕಾನೂನು, ನ್ಯಾಯ, ಕ್ರಮ ಎಲ್ಲವೂ ಎಲ್ಲರಿಗೂ ಸಮಾನಾಗಿ ಇರಬೇಕು. ಎಲ್ಲರನ್ನೂ ಸಮಾನಾಗಿ ಕಾಣುವ ವಾತಾವರಣ ಸೃಷ್ಠಿಯಾಗಬೇಕು. ಸರ್ವ ಜನಾಂಗದ ಶಾಂತಿಯ ತೋಟವಾಗಿ ರಾಜ್ಯ, ಜಿಲ್ಲೆ ಮಾರ್ಪಾಡಾಗಬೇಕು ಎಂಬುದು ಎಲ್ಲರ ಆಶಯ ಎಂದರು.
ಸಿನಿಮಾದ ಮೂಲಕ, ಕಟ್ಟುಕಥೆಗಳ ಮೂಲಕ ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವ ವ್ಯವಸ್ಥಿತ ಷಡ್ಯಂತ್ರ ಈಗ ಎಲ್ಲೆಡೆ ನಡೆಯುತಿದೆ ಎಂದು ಅವರು ಆರೋಪಿಸಿದರು. ಹಲವು, ಕಟ್ಟು ಕಥೆಗಳನ್ನೂ, ಸುಳ್ಳು ಪ್ರಚಾರಗಳನ್ನು ವ್ಯವಸ್ಥಿತವಾಗಿ ಮಾಡಲಾಗುತಿದೆ ಎಂದು ಅವರು ಬೊಟ್ಟು ಮಾಡಿದರು. ಕೇರಳ ರಾಜ್ಯದ ಜನತೆಯ ಮಾನವೀಯತೆ, ಸೌಹಾರ್ಧತೆ, ಜಾತಿ, ಧರ್ಮ ಮೀರಿದ ಐಕ್ಯತೆ ದೇಶಕ್ಕೆ ಮಾದರಿ. ಅದು ಅಲ್ಲಿನ ರಿಯಲ್ ಸ್ಠೊರಿ ಅದನ್ನು ಜನ ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು. ಇಂದು ದೇಶದಲ್ಲಿ ಸುಳ್ಳು ಪ್ರಚಾರಗಳು, ಅಪಪ್ರಚಾರಗಳು ಹೆಚ್ಚಾಗಿ ರಾರಾಜಿಸುತ್ತಿದೆ. ಈ ರೀತಿಯ ವ್ಯವಸ್ಥಿತ ಅಪ ಪ್ರಚಾರದಿಂದ ಸಮಾಜದಲ್ಲಿ ಅಶಾಂತಿ, ಅಪ ನಂಬಿಕೆಗೆ ಕಾರಣವಾಗುತಿದೆ. ಆದುದರಿಂದ ಸುಳ್ಳು ಸುದ್ದಿ, ಅಪ ಪ್ರಚಾರ ಮಾಡುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟಿ.ಎಂ.ಶಹೀದ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮೂಸಾ ಕುಂಞಿ ಪೈಂಬೆಚ್ಚಾಲ್, ಸಲೀಂ ಪೆರುಂಗೋಡಿ, ಸಿದ್ದಿಕ್ ಕೊಕ್ಕೊ, ಅಕ್ಬರ್ ಕರಾವಳಿ, ಅಶ್ರಫ್, ಹನೀಫ್ ಬೀಜಕೊಚ್ಚಿ ಉಪಸ್ಥಿತರಿದ್ದರು.