ಸುಳ್ಯ:ಸುಳ್ಯ ತಾಲೂಕಿಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಸರಕಾರದ ಮುತುವರ್ಜಿಯಲ್ಲಿ ನಡೆಯಬೇಕು ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯದ ಅಭಿವೃದ್ಧಿಗೆ
ಎಲ್ಲರ ಕೊಡುಗೆ ಇದೆ. ಆದುದರಿಂದ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ತಾಲೂಕು ಆಡಳಿತದ ನೇತೃತ್ವದಲ್ಲಿ ಸರಕಾರಿ ಕಾರ್ಯಕ್ರಮವಾಗಿ ಆಯೋಜನೆಗೊಳ್ಳಲಿ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರನ್ನು ಕರೆಸುವ ಪ್ರಯತ್ನ ಮಾಡುತ್ತೇವೆ. ಆದರೆ ಎಲ್ಲರನ್ನು ಒಟ್ಟು ಸೇರಿಸುವ ಪ್ರಯತ್ನ ಆಗಬೇಕು ಎಂದು ಹೇಳಿದರು.
ದಫ್ ಎಂಬುದು ಒಂದು ಸಾಂಸ್ಕೃತಿಕ ಕಲೆ.ಅದರ ಬಗ್ಗೆ ಯಾವುದೇ ಸಂಕುಚಿತ ಮನೋಭಾವನೆ ಬೇಡ ಎಂದು ಅವರು ಅಭಿಪ್ರಾಯಪಟ್ಟರು. ಕೆಲವರು ವಿರೋಧ ಮಾಡುತ್ತಾರೆ ಎಂದು ದಫ್ ಪ್ರದರ್ಶನ ಕಾರ್ಯಕ್ರಮವನ್ನು ರದ್ದು ಮಾಡುವುದು ಸರಿಯಾದ ಕ್ರಮ ಅಲ್ಲ ಎಂದು ಅವರು ಹೇಳಿದರು.













