ಮಂಗಳೂರು: ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛತೆಯೇ ಸೇವೆ ಆಂದೋಲನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದ್ದು,ಈ ಅಂಗವಾಗಿ 15 ದಿವಸಗಳ ಕಾಲ ಜಿಲ್ಲೆಯಾದ್ಯಂತ ಸ್ವಚ್ಚತಾ ಜಾಥ, ರ್ಯಾಲಿ, ಶ್ರಮದಾನ ಕಾರ್ಯಕ್ರಮ ಸಂಘಟಿಸುವಂತೆ ಜಿಲ್ಲಾಧಿಕಾರಿ ದರ್ಶನ ಹೆಚ್.ವಿ ಕರೆ ನೀಡಿದರು.ಅವರು ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ
ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರತಿಜ್ಞೆ ವಿಧಿ ಬೋಧಿಸಿ ಮಾತನಾಡಿದರು.ಈ ಅಭಿಯಾನವು ಜನ ಸಮುದಾಯದಲ್ಲಿ ಸ್ವಚ್ಛತೆಯ ಆಶಯಗಳನ್ನು ಬಲ ಪಡಿಸಲು ಆಚರಿಸಲಾಗುತ್ತಿದೆ. ಎಲ್ಲಾ ನಗರ ಮತ್ತು ಗ್ರಾಮಗಳಲ್ಲಿ ದೃಶ್ಯ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದರು.ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಈ ಅಭಿಯಾನದ ಅವಧಿಯಲ್ಲಿ ಸ್ವಚ್ಛತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆಯ ಮೂಲಕ ದ.ಕ ಜಿಲ್ಲೆ ಸಂಪೂರ್ಣ ಸ್ವಚ್ಚತೆ ಸಾಧಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ ,ಎಲ್ಲಾ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





