ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ವತಿಯಿಂದ ಜ.7ರಿಂದ 13ರ ತನಕ ಮಕರ ಸಂಕ್ರಾಂತಿ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ. ಡಿ.ವೀರೆಂದ್ರ ಹೆಗ್ಗಡೆಯವರ ಆಶಯದಂತೆ “ನಮ್ಮ ಊರು ನಮ್ಮ ಶ್ರದ್ದಾ ಕೇಂದ್ರ ‘ಸ್ವಚ್ಚತಾ ಸಪ್ತಾಹ’ ಕಾರ್ಯಕ್ರಮ ನಡೆಯಿತು. ಸುಳ್ಯ ತಾಲೂಕಿನ
ವಿವಿಧ ದೇವಸ್ಥಾನ, ದೈವಸ್ಥಾನ,ಸರಕಾರಿ ಶಾಲಾ ಆವರಣ,ಭಜನಾ ಮಂದಿರಗಳ ಆವರಣ ಹಾಗೂ ಇತರೆ ಸ್ಥಳಗಳಲ್ಲಿ ಒಟ್ಟು 76 ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ತಾಲೂಕಿನಾದ್ಯಂತ ಒಟ್ಟು 35 ದೇವಸ್ಥಾನ, 23 ದೈವಸ್ಥಾನಗಳ ಆವರಣ, 14 ಭಜನಾ ಮಂದಿರಗಳ ಆವರಣ,1 ಸರಕಾರಿ ಶಾಲಾ ಆವರಣ, 1 ಚರ್ಚ್ ಹಾಗೂ ಇತರೆ 2 ಸೇರಿದಂತೆ ಒಟ್ಟು 76 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಭಜನಾ ಮಂದಿರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸಂಘದ ಸದಸ್ಯರು, ಶೌರ್ಯ ವಿಪತ್ತು ತಂಡದವರ ಸಹಕಾರದೊಂದಿಗೆ ವಲಯದ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಹಾಗೂ ಊರಿನ ಗ್ರಾಮಸ್ಥರು, ಸ್ಥಳಿಯ ಮತ್ತು ಶ್ರದ್ದಾ ಕೇಂದ್ರ ಪದಾಧಿಕಾರಿಗಳು ಸೇರಿ ಒಟ್ಟು 2,213 ಜನರು ಈ ಸ್ವಚ್ಚತಾ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಂಡರು. ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












