ಸುಳ್ಯ: ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿರುವ ತಮಿಳು ಬಾಂಧವರು ತಾಯ್ನಾಡಿಗೆ ಮರಳಿ 50 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತಮಿಳು ಬಾಂಧವರ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ ತಮಿಳು ಬಾಂಧವರ ಬೃಹತ್ ಸಮಾವೇಶ ನ.10 ರಂದು ಸುಳ್ಯ ಪರಿವಾರಕಾನದ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು
ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರಲಿಂಗಂ ತೊಡಿಕಾನ ಹಾಗೂ ಶಿವಕುಮಾರ್ ಎಸ್. ಕಾರ್ಯಕ್ರಮದ ಮಾಹಿತಿ ನೀಡಿ 18-19 ನೇ ಶತಮಾನದಲ್ಲಿ ಶ್ರೀಲಂಕಾಕ್ಕೆ ಉದ್ಯೋಗ ನಿಮಿತ್ತ ಭಾರತದಿಂದ ತೆರಳಿದ ತಮಿಳು ಜನಾಂಗ ಬಳಿಕ ಭಾರತ- ಶ್ರೀಲಂಕಾ ಸರಕಾರಗಳ ಒಪ್ಪಂದದಂತೆ ಭಾರತಕ್ಕೆ ಮರಳಿ ಬಂದು ಪುನರ್ವಸತಿಯನ್ನು ಕಂಡುಕೊಂಡು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ಪ್ಲಾಂಟೇಷನ್ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೇ 5 ರಿಂದ 10% ಜನರು ಶಿಕ್ಷಣ ಪಡೆದು ಸರಕಾರಿ, ಖಾಸಗಿ ಉದ್ಯೋಗಗಳಲ್ಲಿ ದುಡಿಯುತ್ತಿದ್ದಾರೆ.
ಹಲವಾರು ಕಾರ್ಮಿಕ ಸಂಘಟನೆಗಳು, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಸಮುದಾಯದ ಏಳಿಗೆಗಾಗಿ ದುಡಿಯುತ್ತಿವೆ. ಈ ಎಲ್ಲಾ ಸಂಘ ಸಂಸ್ಥೆಗಳು ಸೇರಿ ನಮ್ಮ ಸಮುದಾಯದ ಅಸ್ತಿತ್ವವನ್ನು ತೋರ್ಪಡಿಸುವ ನೆಲೆಯಲ್ಲಿ ಹಾಗೂ ಸರಕಾರಕ್ಕೆ ನಮ್ಮ ಕಷ್ಟ-ನಷ್ಟಗಳನ್ನು, ಜೀವನ ಸ್ತರವನ್ನು
ಮನವರಿಕೆ ಮಾಡಲು ಅರ್ಥಪೂರ್ಣ ಸುವರ್ಣ ಮಹೋತ್ಸವ ಆಚರಣೆ ನಡೆಸಲು ನಿರ್ಧರಿಸಲಾಗಿದೆ. ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನ.10ರಂದು ಬೆಳಿಗ್ಗೆ 8.30 ರಿಂದ ಸುಳ್ಯದ ಮುಖ್ಯ ರಸ್ತೆಯಲ್ಲಿ (ಸುಳ್ಯದ ಜ್ಯೋತಿ ಸರ್ಕಲ್ ನಿಂದ ಜಾನಕಿ ವೆಂಕಟ್ರಮಣ ಸಭಾಭವನ, ಪರಿವಾರಕಾನದ ವರೆಗೆ)ನಮ್ಮ ಸಮುದಾಯದ ಕಲೆ-ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿಗೆ ನಡೆಯಲಿದೆ. ಬಳಿಕ ತಮಿಳು ಬಾಂಧವರ ಬೃಹತ್ ಸಮಾವೇಶ ನಡೆಯಲಿದೆ. ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ
ವಸತಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರು ಈಶ್ವರ್ ಖಂಡ್ರೆ, ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಐಎಎಸ್ ಅಧಿಕಾರಿ ಹಾಗೂ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಬ್ಯಾಡಗಿ ವಿಧಾನಸಭಾ ಶಾಸಕ ಹಾಗೂ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನೀಲಪ್ಪ ಶಿವಣ್ಣವರ್, ಮಾಜಿ ಸಚಿವ ಬಿ ರಾಮನಾಥ್ ರೈ, ರೆಪ್ಪೋ ಬ್ಯಾಂಕ್ ಲಿಮಿಟೆಡ್ ನ ಚೇರ್ಮೆನ್, ಇ.ಸಂದಾನಂ, ರೆಪ್ಪೋ ಹೋಂ ಫೈನಾನ್ಸ್ ಲಿಮಿಟೆಡ್ನ ಚೇರ್ಮೆನ್ ಸಿ ತಂಗರಾಜ್ ,ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶಿರೂರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ,ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಮೊದಲಾದವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಆಂಬ್ಯುಲೆನ್ಸ್ ಹಾಗೂ ಫ್ರೀಜರ್, ಹಾಗೂ ಇತರ ಸೇವೆಗಳ ಲೋಕಾರ್ಪಣೆ ಹಾಗೂ ಹೊಲಿಗೆ ಯಂತ್ರಗಳ ವಿತರಣೆ ನಡೆಯಲಿದೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಮಿಳು ಬಾಂಧವರ ಸುವರ್ಣ ಮಹೋತ್ಸವ ಅಧ್ಯಕ್ಷ ಕುಮಾರೇಶ್ವರನ್ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಮುಲ್ಲೈ ಮುಗಿಲನ್ ಎಂ.ಪಿ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಹೈ ಕೋರ್ಟ್ನ ಹಿರಿಯ ನ್ಯಾಯವಾದಿ ವನಿತಾದೇವಿ ಸೋಮಶೇಖರ್, ಉದ್ಯಮಿ ಡಾ.ಕನಕರಾಜ ಮತ್ತಿತರರು ಭಾಗವಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಸಮಾಜದ ಹಿರಿಯರು ಹಾಗೂ ಪ್ರತಿಭೆಗಳನ್ನು ಸನ್ಮಾನಿಸಲಾಗುವುದು ಡಾಕ್ಯುಮೆಂಟರಿ, ಹಾಗೂ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು.
ಸಮಾರಂಭದಲ್ಲಿ ತಮಿಳು ಸಮಾಜದ ಪ್ರತಿಭೆಗಳಿಂದ ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶಂಕರಲಿಂಗಂ ತೊಡಿಕಾನ ಹಾಗೂ ಶಿವಕುಮಾರ್ ಎಸ್. ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ರಾಜಕೃಷ್ಣ ಕಡಬ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮಸ್ವಾಮಿ ಆನಂದ, ಜೀವರತ್ನ ನಾಗಪಟ್ಟಣ, ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ನ ಟ್ರಸ್ಟಿ ತಂಗವೇಲು ನಾಗಪಟ್ಟಣ, ಸುವರ್ಣ ಮಹೋತ್ಸವ ಸಮಿತಿ ಸದಸ್ಯರಾದ ಆಂಟನಿ ರಾಜ್,
ಅಂಬಿಕಾ ಕುಕ್ಕಂದೂರು, ಕೃಷ್ಣವೇಣಿ ಕುಕ್ಕಂದೂರು ಉಪಸ್ಥಿತರಿದ್ದರು.