ಸುಳ್ಯ: ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ನಾಯಕರು ಹಾಗು ಕಾರ್ಯಕರ್ತರ ನಿಯೋಗ ಬೆಂಗಳೂರಿಗೆ ತೆರಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಹೆಚ್.ಎಂ.ನಂದಕುಮಾರ್ ಅವರಿಗೆ ಸೀಟ್ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಸುಳ್ಯ ಹಾಗು ಕಡಬ ಬ್ಲಾಕ್ನ ಸುಮಾರು 50 ಪ್ರಮುಖರ ತಂಡ ಬೆಂಗಳೂರಿಗೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ

ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ,ಡಾ. ಜಿ. ಪರಮೇಶ್ವರ್, ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಮುಂದಿಟ್ಟಿದ್ದಾರೆ.
ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಂದಕುಮಾರ್ ಅವರಿಗೆ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ನಂದಕುಮಾರ್ ಅವರು ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ನಂದಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಗೆಲುವು ಸುನಿಶ್ಚಿತ ಎಂದು ನಾಯಕರಿಗೆ ಮನವರಿಕೆ ಮಾಡಲಾಗಿದೆ.

ಅಹವಾಲು ಆಲಿಸಿದ ನಾಯಕರು ಎರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ತಿಳಿಸಿದ್ದಾರೆ ಎಂದು ನಿಯೋಗದಲ್ಲಿದ್ದ ಪ್ರಮುಖರು ಮಾಹಿತಿ ನೀಡಿದ್ದಾರೆ. ನಂದಕುಮಾರ್ ಅಭಿಮಾನಿ ಬಳಗದ ಪ್ರಮುಖರಾದ
ಸಚಿನ್ ರಾಜ್ ಶೆಟ್ಟಿ, ಕೆ.ಗೋಕುಲ್ದಾಸ್, ಬಾಲಕೃಷ್ಣ ಬಳ್ಳೇರಿ, ಉಷಾ ಅಂಚನ್, ಭವಾನಿಶಂಕರ ಕಲ್ಮಡ್ಕ, ಪ್ರವೀಣ್ ಕೆಡಿಂಜಿ, ಅನಿಲ್ ರೈ, ವಿಜಯಕುಮಾರ್ ರೈ, ಉಷಾ ಅಂಚನ್,ಪೈಝಲ್, ಶಶಿಧರ ಎಂ ಜೆ, ಕಂದಸ್ವಾಮಿ, ಬಶೀರ್ ನೇಲ್ಯಮಜಲು, ಹಮೀದ್, ಲಕ್ಷ್ಮಣ ಬೊಳ್ಳಜೆ ಮತ್ತಿತರರು ಉಪಸ್ಥಿತರಿದ್ದರು.