ವಯನಾಡು: ಕೇಂದ್ರ ಪೆಟ್ರೋಲಿಯಂ, ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ಗೋಪಿ ಭೂಕುಸಿತ ಸಂಭವಿಸಿರುವ ವಯನಾಡು ಜಿಲ್ಲೆಗೆ ಭೇಟಿ ನೀಡಿದರು. ಚೂರಲ್ಮಲ, ಮುಂಡಕೈ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಯನಾಡು ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕೆಂಬ ಬೇಡಿಕೆಯನ್ನು
ಕಾನೂನಿನ ಅಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು, ‘ಮುಂಡಕ್ಕೈ ಮತ್ತು ಚೂರಲ್ಮಲ ಪ್ರದೇಶಗಳಲ್ಲಿ ಉಂಟಾಗಿರುವ ಭೂಕುಸಿತದ ಮೌಲ್ಯಮಾಪನದ ಬಳಿಕ ಕೇಂದ್ರ ಸರ್ಕಾರವು ಕಾನೂನು ಅಂಶಗಳನ್ನು ಪರಿಶೀಲಿಸಲಿದೆ. ಭೂಕುಸಿತ ಪರಿಣಾಮ ಕುರಿತು ಅಧ್ಯಯನ ನಡೆಸಬೇಕಾಗಿದೆ’ ಎಂದು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿಗಳೊಂದಿಗೆ ಸಚಿವ ಸುರೇಶ್ ಗೋಪಿ ಮಾತುಕತೆ ನಡೆಸಿದರು.‘ಪ್ರವಾಹ ಪೀಡಿತ ಪ್ರದೇಶಗಳ ಸ್ಥಿತಿಯ ಕುರಿತ ವಿವರವನ್ನು ಕೇಂದ್ರ ಸರ್ಕಾರದ ಮುಂದಿಡುತ್ತೇನೆ. ಕೇಂದ್ರದಿಂದ ನೀಡಲಾಗುವ ನೆರವಿಗೆ ಸಂಬಂಧಿಸಿದಂತೆ ರಾಜ್ಯವು ಭೂಕುಸಿತದ ಪರಿಣಾಮವನ್ನು ಅಂದಾಜು ಮಾಡಿ ಮನವಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.